ಓ ಮನಸೇ,
ನಿನ್ನ ನಾ ಹೇಗೆ ಅರ್ಥ ಮಾಡಿಕೊಳ್ಳಲಿ
ನಿನ್ನಲ್ಲಿ ನನ್ನ ನಾ ಹೇಗೆ ಗುರುತಿಸಲಿ
ನನ್ನೊಳಗಿರುವ ನಿನ್ನ ನಾ ಹೇಗೆ ಹುಡುಕಲಿ
ನೀ ಒಮ್ಮೊಮ್ಮೆ ಈ ಬಾನಿನಷ್ಟು ವಿಶಾಲ
ಹೂವಿನ ಎಸಳಿನಷ್ಟು ಕೋಮಲ
ಕಡೆದ ಬೆಣ್ಣೆಯಷ್ಟು ಮೃದುಲ
ಆದರೆ, ಕೆಲವೊಮ್ಮೆ ವಜ್ರದಷ್ಟು ಕಠಿಣ
ನಿನ್ನೊಂದಿಗೆ ಹೊಂದಿಕೊಳ್ಳುವುದರೊಳಗೆ ನಾ ಹೈರಾಣ
ನಿನ್ನಲ್ಲಿ ಈ ಊಸರವಳ್ಳಿಯಂತಹ ಬದಲಾವಣೆ
ಅದು ಏಕೆಂದು ನಾನಂತೂ ಕಾಣೆ
ನಿನ್ನಲ್ಲೂ ಎರಡು ವಿಧ
ಕೆಟ್ಟಮನಸು, ಒಳ್ಳೆಮನಸು
ಒಂದೊಂದರದು ಒಂದೊಂದು ರೀತಿ ಸೊಗಸು
ನೀ ಕೆಲವೊಮ್ಮೆ ಭಾರ
ಕೆಲವೊಮ್ಮೆ ಅತಿ ಹಗುರ
ಅಬ್ಬಬ್ಬಾ ನೀನಂತು ನನಗೆ ಕೌತುಕದ ಆಗರ
ನಿನ್ನಲ್ಲಿ ಅಡಗಿವೆ ಅದೆಷ್ಟು ಪದರಗಳು
ಒಂದೊಂದು ಪದರದಲ್ಲೂ ಹಲವಾರು ಭಾವನೆಗಳು
ನೀ ಕಣ್ಣಿಗೆ ಕಾಣುವುದಿಲ್ಲ
ನಿನ್ನ ಮುಟ್ಟಲು ಸಾಧ್ಯವಿಲ್ಲ
ಇನ್ನು ನಿನ್ನನ್ನು ಬಚ್ಚಿಡಲೂ ಕಷ್ಟ ಬಿಚ್ಚಿಡಲೂ ಕ್ಲಿಷ್ಟ
ಅರಿವಿಗೆ ಬಾರದು ನಿನ್ನ ಅಗಲ ಆಳ
ನೀ ಬಹಳ ನಿಗೂಢ ಊಹೆಗೆ ನಿಲುಕದು ನಿನ್ನ ವರ್ತನೆ ನೀ ಬಹಳ ಚಂಚಲ
No comments:
Post a Comment