Tuesday, September 15, 2020

ತಾಯಿ ನಿನ್ನ ಋಣ

ನವಮಾಸಗಳು ಎನ್ನ ಹೊತ್ತು, ನೋವನ್ನೆಲ್ಲ ನೀನೊಬ್ಬಳೇ ನುಂಗಿ ಹೆತ್ತು, ನಿನ್ನ ಕರುಳಬಳ್ಳಿಯ ಸುತ್ತಿಕೊಂಡು ಬಂದ ನನ್ನ ಕಂಡು ಮುಗುಳ್ನಕ್ಕೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ಅತ್ತಾಗ ನೀ ಸಂಕಟಪಟ್ಟು ನಾ ನಕ್ಕಾಗ ನೀ ಸಂತಸಪಟ್ಟು ನನ್ನ ತಪ್ಪುಗಳನ್ನೆಲ್ಲ ನಯವಾಗಿ ತಿದ್ದಿ ನನ್ನ ಏಳ್ಗೆಗಾಗಿ ಶ್ರಮಿಸಿದ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ಗೆದ್ದಾಗ ನೀ ಜೊತೆಯಿದ್ದು ಸಂಭ್ರಮಪಟ್ಟು ನಾ ಸೋತಾಗ ನೀ ಜೊತೆಯಿದ್ದು ಧೈರ್ಯ ಹೇಳಿ ನನ್ನ ಆಯ್ಕೆಗಳಿಗೆ ಸಮ್ಮತಿಯಿತ್ತ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನನ್ನ ಆಸೆಗಳಿಗೆಂದೂ ನೀ ತಣ್ಣೀರೆರಚಲಿಲ್ಲ ನನ್ನ ಭಾವನೆಗಳಿಗೆ ನೀ ಸ್ಪಂದಿಸಿದೆಯಲ್ಲ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನಕ್ಕಿಂತ ಮಿಗಿಲಾದ ಸ್ಥಾನ ನಿನ್ನ ಹೃದಯದಲ್ಲಿ ನನಗಿತ್ತೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ನಿನ್ನ ನೆನೆಯಲಿ ನೆನೆಯದಿರಲಿ ನೀ ನನ್ನ ಸದಾ ನೆನೆದೆಯಲ್ಲ ನಾ ನಿನ್ನ ಬಗ್ಗೆ ಕರುಣೆ ತೋರಲಿ ತೋರದಿರಲಿ ನೀ ನನಗೆ ಕರುಣಾಮಯಿಯಾದೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ನಿನ್ನ ಬಗ್ಗೆ ಯೋಚಿಸದಿದ್ದರೂ ನೀ ನನ್ನ ಬಗ್ಗೆಯೇ ಚಿಂತಿಸಿದೆ ನಿನ್ನ ಬಳಿ ಇರುವಷ್ಟು ನಿಷ್ಕಲ್ಮಶ ಪ್ರೀತಿ ನನ್ನ ಬಳಿ ಇಲ್ಲವಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಿನ್ನ ಋಣ ತೀರಿಸಲು ಮುಂದಿನ ಜನ್ಮದಲ್ಲೂ ನಿನ್ನ ಹೊಟ್ಟೆಯಲ್ಲೇ ಹುಟ್ಟಿ ಬರಲೇ? ಆಗಲಾದರೂ ಋಣಸಂದಾಯವಾಗುವುದೇ?

ತಾಯಿ, ನಿನ್ನ ಋಣ ತೀರಿಸಲು ಸಾಧ್ಯವೂ ಇಲ್ಲ, ಅದು ತೀರಿಸಲು ಸಾಲವೂ ಅಲ್ಲ

ತಾಯಿ, ನಿನ್ನ ಋಣ ತೀರಿಸಲಾರೆ 

No comments: