ಕಿನಾರೆಯಲ್ಲಿ ನಿಂತು ಮೊದಲು ನಿನ್ನ ಕಂಡಾಗ ಮನದಲ್ಲಿ ಉಲ್ಲಾಸದ ಅಲೆಗಳು ಮೂಡಿತಾಗ
ಅಲೆಅಲೆಯಾಗಿ ನೀ ಬಂದು ಕಾಲುಗಳ ಸೋಕಲು ನೀಡಿತು ರೋಮಾಂಚನ ತನುಮನಕೆ ಮೊದಮೊದಲು
ಒಮ್ಮೆ ಚಿಕ್ಕ ಅಲೆ ಒಮ್ಮೆ ದೊಡ್ಡ ಅಲೆ
ನಿನಗೆ ಸಂತಸವೋ ಅಥವಾ ದುಃಖವೋ ಇದು ಯಾವುದರ ಪ್ರತೀಕವೋ ನಾನರಿಯೆ
ಮೊದಲು ನೀ ಶಾಂತಮೂರ್ತಿಯಂತೆ ಕಂಡುಬಂದರೂ
ನಂತರ ಕಂಡುಬಂದಿತು ನಿನ್ನ ರೌದ್ರರೂಪ
ನೀನಂತೂ ನನಗೆ ಬಿಡಿಸಲಾಗದ ಒಗಟು
ನಿನ್ನಲ್ಲಿ ಅಡಗಿವೆ ವಿಧವಿಧ ಜೀವರಾಶಿಗಳು ನೀ ಕರುಣಾಮಯಿ ಎನ್ನಲೇ? ಅಥವಾ ನಿನ್ನ ವಿಕೋಪಕ್ಕೆ ಬಲಿಯಾಗಿ ಹೆಣವಾಗಿರುವ ರಾಶಿ ರಾಶಿ ಜೀವಗಳ ಕಂಡು ಜಲರಾಕ್ಷಸ ಎನ್ನಲೇ?
ಆದರೂ ನಿನ್ನ ನೋಟ ಬಲು ಚೆಂದ
ನಿನಗಿದೆ ನಿನ್ನದೇ ಆದ ಅಂದ
ನಿನ್ನೊಳಗೆ ಅವಿತುಕೊಳ್ಳಲು ಮುನ್ನುಗ್ಗುತ್ತಿರುವ ಸೂರ್ಯನ ಕಂಡಾಗಲಂತೂ ಮನಕೆ ಆನಂದ
ನಿನ್ನ ಸಹವಾಸದಲ್ಲಿ ಏನೋ ಒಂದು ರೀತಿಯ ನೆಮ್ಮದಿ
ದೂರವಾಗಿದೆ ದುಃಖ ದುಮ್ಮಾನಗಳು
ನಿನ್ನಲ್ಲಿರುವ ಉಪ್ಪು ನೀರಂತೆ ಗಡಸಾಗಿದ್ದ ಮನವು ಈಗ ತಿಳಿಯಾಗಿದೆ
ಓ ಶರಧಿ, ಅರಿತವರು ಯಾರು ನಿನ್ನ ಪರಿಧಿ ಒಂದಂತೂ ನಿಜ ನಿನಗೂ ಈ ಮನಕ್ಕೂ ಏನೋ ಸಾಮ್ಯತೆ ಅದಕ್ಕೆ ಇರಬೇಕು ನೀನೀ ಮನಕ್ಕೆ ಹತ್ತಿರ
No comments:
Post a Comment