Saturday, September 19, 2020

ನಾಳೆ

ನಾಳೆಯು ಬರಲಿ ಖಂಡಿತ ಬರಲಿ ಮುದುಡಿದ ಮನಕೆ ನವ ಚೈತನ್ಯವ ತರಲಿ ಸೊರಗಿದ ತನುವಿಗೆ ನವ ಉಲ್ಲಾಸ ತರಲಿ

ಇಂದಿನ ಕಷ್ಟಗಳು ಇಂದಿಗೆ ಮುಗಿಯಲಿ ನಿನ್ನೆಯ ನೋವು ಇಂದೇ ಇಂಗಲಿ ಸುಖ ಸಂತೋಷವ ನಾಳೆಯು ತರಲಿ

ಚಿಗುರಿದ ಕನಸುಗಳು ಚಿವುಟದೆ ಉಳಿಯಲಿ ಬರಿ ಹಗಲುಗನಸಾಗದೆ ನನಸಾಗುವ ನಾಳೆಯು ಬೇಗನೆ ಬರಲಿ

ಹೃದಯವು ನೆಮ್ಮದಿಯಿಂದ ಹಗುರಾಗಲಿ ಚಿಂತೆಯ ಕಂತೆಯು ದೂರವಾಗಲಿ ನೆಮ್ಮದಿಯೊಂದಿಗೆ ನಾಳೆಯು ಬರಲಿ

ಕಹಿ ನೆನಪುಗಳ ಮನವು ಮರೆಯಲಿ ಸಿಹಿ ನೆನಪುಗಳು ಮಾತ್ರ ಉಳಿಯಲಿ ಆ ನೆನಪುಗಳೇ ನಾಳೆಗೆ ಶಾಶ್ವತವಾಗಲಿ

ಎಲ್ಲ ಸೋಲುಗಳು ಇಂದಿಗೆ ಮುಗಿಯಲಿ ಅಪಮಾನವೆಂಬ ಅಸುರನು ಇಂದೇ ಸಾಯಲಿ ಗೆಲುವಿನ ಅಶ್ವವ ಏರುತ ನಾಳೆಯು ಹೆಮ್ಮೆಯಿಂದ ಬರಲಿ

ಕಂಬನಿಗಳೆಲ್ಲ ಇಂದೇ ಜಿನುಗಲಿ ನಿರಾಸೆ ನಿಟ್ಟುಸಿರು ಇಂದಿಗೆ ಕೊನೆಯಾಗಲಿ ತುಂಟ ಕಿರುನಗೆ ಅಧರದ ಮೇಲೆ ಮೂಡಿಸುವ ನಾಳೆಯು ಬರಲಿ

ಕೆಟ್ಟ ದಿನಗಳು ಇಂದಿಗೆ ಮುಗಿಯಲಿ ಕೆಟ್ಟ ಯೋಚನೆಗಳು ಇಂದಿಗೆ ನಿಲ್ಲಲಿ ಹೊಸಬೆಳಕನ್ನು ಹೊತ್ತು ನಾಳೆಯು ಬರಲಿ

ಮತ್ತೆ ಚೈತ್ರವು ಬರಲಿ ನಾಳೆಯು ಅದನು ತರಲಿ ಒಣಗಿ ಹೋದ ಮಾಮರವು ಮತ್ತೆ ಚಿಗುರಲಿ ಹರುಷವು ತಾ ನಲಿಯಲಿ

No comments: