Thursday, September 24, 2020

ಮಿತಿ

ಇನ್ನೆಷ್ಟು ಕೊರಗಲಿ ಇನ್ನೆಷ್ಟು ಮರುಗಲಿ ಇನ್ನೆಷ್ಟು ಕಂಬನಿ ಮಿಡಿಯಲಿ ಈ ದುಃಖಕೆ

ಇನ್ನೆಷ್ಟು ನಿಟ್ಟುಸಿರು ಹೊರಹೊಮ್ಮಿಸಲಿ ಇನ್ನೆಷ್ಟು ಪಾತಾಳಕ್ಕಿಳಿಯಲಿ ಈ ಕಷ್ಟಗಳ ಸಹಿಸಲಾರದೆ

ಕೈ ಹಿಡಿದು ನಡೆಸುವವನೆ ಕೈ ಕೊಟ್ಟಾಗ ನಾ ಎಡವಿ ಬೀಳುತ್ತಿದ್ದರೂ ನೋಡಿ ಸುಮ್ಮನಿರುವಾಗ ಇನ್ನೆಷ್ಟು ದುಃಖಿಸಲಿ

ಆಸೆ ಪಟ್ಟಿದ್ದು ಯಾವೊಂದೂ ಕೈಗೂಡದಾಗ ಇನ್ನೆಷ್ಟು ನಿರಾಸೆಗೊಳ್ಳಲಿ ನಾನೀಗ

ನೆಮ್ಮದಿಯ ಬಾಳಿಂದ ಬಹುದೂರ ಸಾಗುತ್ತಿರುವಾಗ ಸುಖವನ್ನೆಲ್ಲ ಕಳೆದುಕೊಳ್ಳುತ್ತಿರುವಾಗ ಇನ್ನೆಷ್ಟು ಬೇಸರಿಸಲಿ

ಭಾವನೆಗಳೇ ಬತ್ತಿಹೋಗುತ್ತಿರುವಾಗ ಬದುಕಿನ ಶೃತಿ ಲಯ ತಪ್ಪುತ್ತಿರುವಾಗ ಇನ್ನೆಷ್ಟು ಸಂಕಟಪಡಲಿ

ಎಲ್ಲದರ ಬಗ್ಗೆ ವಿರಕ್ತಿ ಮೂಡುತ್ತಿರುವಾಗ ಎಲ್ಲವ ತೊರೆಯಲು ಕಾಯುತ್ತಿರುವಾಗ ಇನ್ನೆಷ್ಟು ಆತಂಕಪಡಲಿ

ಭಯವೆಂಬ ಭೂತವು ಹೃದಯದಲ್ಲಡಗಿರುವಾಗ ಮಾತು ಮೌನಗಳು ರುಚಿಸದಾಗ ಇನ್ನೆಷ್ಟು ನೋವುಣ್ಣಲಿ

ಇನ್ನೆಷ್ಟು ದಿನ ಈ ಕಷ್ಟ ಕಾರ್ಪಣ್ಯ ಇನ್ನೆಷ್ಟು ದಿನ ಈ ನೋವು ನಿರಾಸೆ ಇನ್ನೆಷ್ಟು ದಿನ ಸಹಿಸಲಿ ಈ ದುಃಖ ದುಮ್ಮಾನ

ಹೇ ವಿಧಾತ ಮರುಕವಿರಲಿ ಈ ತಿರುಕಳ ಮೇಲೆ ಮಿತಿ ಇರಲಿ ನೀ ನೀಡುವ ಕಷ್ಟಗಳಿಗೂ ಮುಕ್ತಾಯವ ಹಾಡು ಎಲ್ಲದಕ್ಕೂ ಇಲ್ಲದಿದ್ದರೆ ಇನ್ನೆಷ್ಟು ಸಹಿಸಲಿ?

No comments: