ಮತ್ತೊಬ್ಬ ಬುದ್ಧ ಮತ್ತೊಬ್ಬ ಮಹಾವೀರ ಹುಟ್ಟಿ ಬರುವನೆ ಈ ಭೂಮಿಯಲ್ಲಿ? ಮತ್ತೊಂದು ಶತಮಾನ ಕಾಯಬೇಕಿಲ್ಲ ಅದಕ್ಕಾಗಿ ಓ ಮನುಜ, ನಿನ್ನಿಂದಲೇ ಅದು ಸಾಧ್ಯ
ಎಂದು ನೀ ಅರಿಷಡ್ವರ್ಗವ ಗೆಲ್ಲುವೆಯೋ ಅಂದೇ ಆ ಸುದಿನ ಅದುವೇ ಮೋಕ್ಷಕ್ಕೆ ದಾರಿ
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೇ ನಿನ್ನ ಶತ್ರುಗಳು ಆಜನ್ಮ ವೈರಿಗಳು
ದಹಿಸಿಕೊಳ್ಳುವೆಯೇಕೆ ಕಾಮದ ಬೆಂಕಿಯಿಂದ ನಿನ್ನ ನೀ
ಕೊನೆಗೊಂದು ದಿನ ಮಣ್ಣಿಗೆ ಸೇರುವುದೀ ದೇಹ
ಕೋಪದ ಕೈಗೆ ಬುದ್ಧಿ ನೀಡುವಿಯೇಕೆ ಕೋಪದಲ್ಲಿ ಕುಯ್ದ ಮೂಗು ಶಾಂತವಾದರೆ ಬರುವುದೇ
ಲೋಭಿ ನೀ ಆಗುವಿಯೇಕೆ ಭೂಮಿಗೆ ಬರುವಾಗಲೂ ಇಲ್ಲಿಂದ ಹೋಗುವಾಗಲೂ ನೀ ಬರಿಗೈದಾಸ
ಹೆಣ್ಣು ಹೊನ್ನು ಮಣ್ಣಿನ ಮೋಹವೇಕೆ ಬರುವಾಗಲೂ ನೀ ಒಂಟಿ ಹೋಗುವಾಗಲೂ ನೀ ಒಂಟಿ ನಿನ್ನ ಹಿಂದೆ ಬರುವುದು ನೀ ಮಾಡಿದ ಪುಣ್ಯವೊಂದೇ
ವಿದ್ಯೆಯ ಮದ ಧನ ಕನಕ ಅಧಿಕಾರದ ಮದವೇಕೆ ಎಲ್ಲವನ್ನೂ ನೀಡಿರುವವನೇ ನಗುತ್ತ ಸುಮ್ಮನಿರುವಾಗ
ಮತ್ಸರದ ಕೆಟ್ಟ ಹೊಗೆಯು ನಿನ್ನ ಮನದಲ್ಲೇಕೆ ಅದು ಬೆಂಕಿಯಾಗಿ ನಿನ್ನನ್ನೇ ಆಹುತಿ ಪಡೆಯುವಾಗ
ಎಲ್ಲ ಅರಿಷಡ್ವರ್ಗಗಳ ಮೇಲೆ ನೀ ಯುದ್ಧ ಸಾರಬಾರದೇಕೆ? ಎಲ್ಲ ಮೆಟ್ಟಿ ನೀ ನಿಲ್ಲಬಾರದೇಕೆ? ಮತ್ತೊಬ್ಬ ಬುದ್ಧ ಮಹಾವೀರ ನೀ ಆಗಬಾರದೇಕೆ?
No comments:
Post a Comment