ಹಿಮಾಲಯದ ತುದಿಯಲ್ಲೋ ರಾಜಸ್ಥಾನದ ಬಂಜರು ನೆಲದಲ್ಲೋ ಅಥವಾ ಅಸ್ಸಾಮಿನ ಗಡಿಪ್ರದೇಶದಲ್ಲೆಲ್ಲೋ ಕಂಡೆ ನಿನ್ನ ಓ ವೀರಯೋಧ
ಆ ಮಂಜಿನ ಚಲಿಯಲ್ಲೂ ನಿನ್ನ ನೆತ್ತರು ಕುದಿಯುತ್ತಿದೆ ಕೆಚ್ಚು ಹೆಚ್ಚುತ್ತಿದೆ ವೈರಿಯ ಸಧೆ ಬಡಿಯಲು
ಆ ಬಿಸಿಲಲ್ಲೂ ನಿನ್ನ ಕೈಗಳು ಮರಗಟ್ಟಿವೆ ಬಂದೂಕು ಹಿಡಿದು ಹಿಡಿದು
ನಿನ್ನ ಪ್ರೀತಿಸುವವರೆಲ್ಲರಿಂದ ದೂರಾಗಿ ದೇಶದ್ರೋಹಿಗಳನ್ನು ಮಟ್ಟಹಾಕಲು ಸನ್ನದ್ಧನಾಗಿರುವೆ
ನಿನ್ನಲ್ಲಿ ಕಾಣುತ್ತಿದೆ ನನಗೆ ಛಲ ಸ್ವಾಭಿಮಾನ, ಹೋರಾಡಲು, ಗುರಿ ತಲುಪಲು
ನಿನ್ನ ಮುಖದ ತೇಜಸ್ಸು, ಅದು ಸೂರ್ಯನಿಗಿಂತಲೂ ಪ್ರಕಾಶಮಾನ
ನಿನ್ನ ಶೌರ್ಯ ಧೈರ್ಯಗಳಿಗಿಲ್ಲ ಯಾರೂ ಸಮಾನ
ನಿನಗೆ ನೀನೇ ಸರಿಸಾಟಿ
ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ನೀನೇ ಮುಖ್ಯ ಕಾರಣ
ಕೊನೆಗೊಂದು ದಿನ ನೀ ಅಪ್ಪುವೆ ವೀರಮರಣ
ಭಾರತಾಂಬೆಯ ಋಣ ತೀರಿಸಲು
ಆದರೆ, ನೀ ಮರೆತೆ ನಿನ್ನ ಹೆತ್ತವ್ವನ ಋಣ ತೀರಿಸಲು
ಹೋಗುವೆ ನೀ ಕೈ ಹಿಡಿದವಳಿಗೆ ವೈಧವ್ಯ ಗಟ್ಟಿಗೊಳಿಸಿ, ನಿನ್ನ ಮಕ್ಕಳ ಅನಾಥರನ್ನಾಗಿಸಿ
ಭೂತಾಯಿಗೆ ನೆತ್ತರ ಅಭಿಷೇಕ ಮಾಡುತ್ತ
ಎಲ್ಲರಿಗೂ ಯುದ್ಧ ಬಂದಾಗ ಮಾತ್ರ ನೆನಪಾಗುವನು ಸೈನಿಕ
ಬೇರೆ ಸಮಯದಲ್ಲಲ್ಲ, ಎಂಥಾ ದುರಂತ!
ಹೇ ವೀರಯೋಧ, ದೇಶರಕ್ಷಕ
ನೀ ಧನ್ಯ ನೀ ಬಲು ಮಾನ್ಯ
ಏಕೆಂದರೆ ಕೊನೆಯ ಉಸಿರಿರುವವರೆಗೂ ತೊರೆಯಲಿಲ್ಲ ಮರೆಯಲಿಲ್ಲ ನೀ ನಿನ್ನ ಕರ್ತವ್ಯ