Thursday, June 11, 2020

ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಕಲಿತರೆ ಮಾತ್ರ ಘನತೆ ಹೆಚ್ಚುವುದೇ?

ನಮ್ಮ ದೇಶದಲ್ಲಿ ಹಿಂದಿನಿಂದ ಗುರು-ಶಿಷ್ಯ ಪರಂಪರೆ ನಡೆದುಕೊಂಡು ಬಂದಿದೆ. ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರರಿಗೆ ಹೋಲಿಸಲಾಗಿದೆ. ಗುರುಕುಲಗಳಿಗೆ ಹೋಗಿ ಅಲ್ಲಿಯೇ ವಾಸವಿದ್ದು ಗುರುಗಳ ಸೇವೆಯನ್ನೂ ಮಾಡುತ್ತ ವಿದ್ಯೆಯನ್ನು ಕಲಿಯುತ್ತಿದ್ದ ಕಾಲವೊಂದಿತ್ತು. ವಿದ್ಯೆಯ ಜೊತೆ ಜೊತೆಗೆ ಬದುಕಿಗೆ ಬೇಕಾದ ಕೌಶಲ್ಯಗಳನ್ನು ಕಲಿಸಲಾಗುತ್ತಿತ್ತು. ಯಾವುದೇ ಫಲಾಪೇಕ್ಷೆಯಿಲ್ಲದೆ ವಿದ್ಯಾದಾನ ಮಾಡಲಾಗುತ್ತಿತ್ತು.
ಪ್ರಸ್ತುತ ಕಾಲಕ್ಕೆ ಬಂದರೆ, ವಿದ್ಯಾದಾನವೆಂಬುದು ಕೇವಲ ಹೆಸರಿಗೆ ಮಾತ್ರ ಉಳಿದಿದೆ. ಹೆಚ್ಚಿನ ವಿದ್ಯಾಸಂಸ್ಥೆಗಳು ದುಡ್ಡು ಮಾಡುವ ಕಾರ್ಖಾನೆಗಳಾಗಿವೆ. ಇವುಗಳ ಧ್ಯೇಯ, ವಿದ್ಯೆ ಕಲಿಸುವುದಕ್ಕಿಂತ ದುಡ್ಡು ಮಾಡುವುದೇ ಆಗಿದೆ. ಉದಾಹರಣೆಗೆ, ಹಿಂದೆಲ್ಲ ಶಾಲೆಗಳು ಕೇವಲ ವಿದ್ಯಾ ಸಂಸ್ಥೆಗಳಾಗಿದ್ದವು, ಕೇವಲ ಪಾಠಗಳನ್ನು ಕಲಿಯಲು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಇಂದು ಶಾಲೆಗಳಲ್ಲೇ ಸಂಗೀತ, ನೃತ್ಯ, ಈಜು, ಯೋಗ, ಕರಾಟೆ ಮುಂತಾದ ಕೌಶಲ್ಯಗಳು, ಹಾಗೂ ಕ್ರಿಕೆಟ್, ಹಾಕಿ, ಫುಟ್ಬಾಲ್ ಮುಂತಾದ ಕ್ರೀಡೆಗಳು ಹೀಗೆ ಎಲ್ಲವನ್ನೂ ಹೇಳಿಕೊಡಲಾಗುತ್ತದೆ ಅಷ್ಟೇ ಅಲ್ಲ ಶಾಲೆಯ ಶುಲ್ಕದಲ್ಲಿ ಇವುಗಳ ಶುಲ್ಕಗಳೂ ಸೇರಿರುತ್ತದೆ. ಹಾಗೂ ಇದೆಲ್ಲವೂ ಕಡ್ಡಾಯವಾಗಿರುತ್ತವೆ. ನಿಮ್ಮ ಮಗು ಈಜು ಕಲಿಯಲು ಇಚ್ಚಿಸಲಿ ಬಿಡಲಿ, ಶುಲ್ಕ ಪಾವತಿಸಲೇ ಬೇಕು. ಅಲ್ಲದೆ, ಪ್ರತಿ ವರ್ಷ ಹೊಸ ಪುಸ್ತಕಗಳು, ವಿವಿಧ ಸ್ಟೇಷನರಿ ಸಾಮಾನುಗಳು, ಸಮವಸ್ತ್ರಗಳನ್ನು ಕೊಳ್ಳಲೇಬೇಕು ಹಾಗೂ ಶಾಲೆಯಲ್ಲೇ ಕೊಳ್ಳಬೇಕು. ಕೆಲವು ಶಾಲೆಗಳಲ್ಲಂತೂ ಮಕ್ಕಳಿಗೆ ಊಟ ತಿಂಡಿಯನ್ನೂ ಅಲ್ಲೇ ನೀಡುತ್ತಾರೆ. ಅದಕ್ಕೆಲ್ಲ ನೀವು ಕೇವಲ ಶುಲ್ಕ ಪಾವತಿಸಿದರೆ ಅಷ್ಟೇ ಸಾಕು.
ಇಂತಹ ಪರಿಸ್ಥಿತಿ ಏರ್ಪಡಲು ನಾವು ಪೋಷಕರೂ ಒಂದು ರೀತಿಯಲ್ಲಿ ಪರೋಕ್ಷ ಕಾರಣರು. ಮಕ್ಕಳನ್ನು ಇಂತಹುದೇ ಶಾಲೆಗೆ ಸೇರಿಸಬೇಕು, ಶುಲ್ಕ ಎಷ್ಟಾದರೂ ಅಡ್ಡಿಯಿಲ್ಲ ಎಂಬ ಮನೋಭಾವ. ರಾತ್ರಿಯೆಲ್ಲಾ ಸರತಿ ಸಾಲಿನಲ್ಲಿ ಕಾದು ಆ ಶಾಲೆಯ ಅಪ್ಲಿಕೇಶನ್ ಫಾರ್ಮ್ ತಂದರೂ ಅಡ್ಡಿಯಿಲ್ಲ, ಸಾಲ ಮಾಡಿದರೂ ಚಿಂತೆಯಿಲ್ಲ, ಪ್ರಖ್ಯಾತ ಶಾಲೆಗಳಲ್ಲಿ ಮಕ್ಕಳು ಓದಿದರೆ ಅದೊಂದು ಪ್ರತಿಷ್ಠೆಯ ವಿಷಯ. ನರ್ಸರಿಗೆ 1-2 ಲಕ್ಷ ಕೊಟ್ಟು ಮಕ್ಕಳನ್ನು ಸೇರಿಸಿದರೇ ಸಮಾಜದಲ್ಲಿ ಘನತೆ ಹೆಚ್ಚುತ್ತದೆ ಎಂಬಂತಾಗಿದೆ.
ನಮ್ಮ ಮಗಳನ್ನು ನಾವು ಒಂದು ಹೊಸ ಶಾಲೆಗೆ ಸೇರಿಸಿದಾಗ ನಮ್ಮ ಬೀದಿಯ ಕೆಲವರು ಆಶ್ಚರ್ಯಪಟ್ಟರು. ಇನ್ನು ಕೆಲವರು ಆಗಾಗ, ಆ ಶಾಲೆ ಚೆನ್ನಾಗಿದೆಯೇ ಎಂದು ನಮ್ಮನ್ನು ವ್ಯಂಗ್ಯವಾಗಿ ಕೇಳುತ್ತಿದ್ದರು. ಯಾವುದೋ ಒಂದು ಹೊಸ, ಇನ್ನೂ ಹೆಸರು ಮಾಡದ, ಪ್ರತಿಷ್ಠಿತವಲ್ಲದ ಶಾಲೆಗೆ ಕಳಿಸುತ್ತಿದ್ದೇವೆ ಎಂದು ಅವರೆಲ್ಲರ ಅನಿಸಿಕೆಯಾಗಿತ್ತು. ಆ ಶಾಲೆ ನಮ್ಮ ಮನೆಯ ಸಮೀಪವೇ ಇದ್ದದ್ದು ಅದನ್ನು ಆಯ್ದುಕೊಳ್ಳಲು ನಮಗೆ ಪ್ರಮುಖ ಕಾರಣವಾಗಿತ್ತು. ನರ್ಸರಿಯ ಮಗುವಿಗೆ ಹೆಚ್ಚು ಪ್ರಯಾಣದ ಆಯಾಸ ಬೇಡ ಎಂಬುದು ನಮ್ಮ ಉದ್ದೇಶವಾಗಿತ್ತು. ಅಲ್ಲಿ ಎಲ್ಲ ಶಾಲೆಗಳಲ್ಲಿರುವಂತೆಯೇ ಆಧುನಿಕ ಸೌಲಭ್ಯಗಳಿದ್ದು ನಮ್ಮ ಬಜೆಟಿಗೆ ಅನುಗುಣವಾಗಿತ್ತು. ಅಲ್ಲದೆ, ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ ಎಂಬುದು ನಮ್ಮ ಪ್ರಬಲ ನಂಬಿಕೆ. ಇಂದು ಆ ಶಾಲೆ ಚೆನ್ನಾಗಿ ಬೆಳೆಯುತ್ತಿದೆ (ಶುಲ್ಕವೂ ಏರಿದೆ!). ನಮ್ಮ ಮಗಳು ಅಲ್ಲಿಗೆ ಸೇರಿ ೫ ವರ್ಷವಾಯಿತು. ಅವಳ ಬೆಳವಣಿಗೆ ನಮಗೆ ಖುಷಿ ತಂದಿದೆ.

ನಿಜ, ಎಲ್ಲ ಶಾಲೆಗಳಲ್ಲೂ ಏನಾದರೂ ಹುಳುಕು ಇದ್ದೇ ಇರುತ್ತದೆ. ಅದು ನೀವು ಲಕ್ಷಗಟ್ಟಲೆ ಶುಲ್ಕ ತೆರುವ ಪ್ರತಿಷ್ಠಿತ ಶಾಲೆ ಇರಬಹುದು ಅಥವಾ ಕಡಿಮೆ ಶುಲ್ಕದ ಶಾಲೆ ಇರಬಹುದು. ಆ ಶಾಲೆಗೆ ಮಕ್ಕಳನ್ನು ಸೇರಿಸಿದ ಮೇಲೇ ಅದೆಲ್ಲ ಅರಿವಿಗೆ ಬರುವುದು. ಒಂದು ಸಾರಿ ಸೇರಿಸಿದ ಮೇಲೆ, ಶುಲ್ಕ ಕಟ್ಟಿ ಆಗಿದೆ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಹೊಂದಿಕೊಂಡು ಹೋಗಬೇಕಾಗುತ್ತದೆ. A ಟು Z ಎಲ್ಲವನ್ನೂ ನೀವು ಶಾಲೆಯಲ್ಲಿಯೇ ಕೊಳ್ಳಬೇಕು ಎಂಬುವುದಂತೂ ಈಗ ಎಲ್ಲ ಖಾಸಗಿ ಶಾಲೆಗಳ ಮಂತ್ರವೇ ಆಗಿದೆ. ಸರಿ, ಈ ಖಾಸಗಿ ಶಾಲೆಗಳ ಸಹವಾಸವೇ ಬೇಡ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕೋಣವೆಂದರೆ, ನಮ್ಮ ದೇಶದ ಸರ್ಕಾರಿ ಶಾಲೆಗಳ ಇಂದಿನ ಪಾಡು ಎಲ್ಲರಿಗೂ ತಿಳಿದೇ ಇದೆ. ವಿದ್ಯಾಭ್ಯಾಸ ಕಲಿಯುವುದಿರಲಿ ಕನಿಷ್ಠ ಸೌಲಭ್ಯಗಳೂ ಇರುವುದಿಲ್ಲ. ಕೆಲವು ದಶಕಗಳ ಹಿಂದೆ ಸರ್ಕಾರಿ ಶಾಲೆಗಳ ಸ್ಥಿತಿ ಇಷ್ಟು ಬಿಗಡಾಯಿಸಿರಲಿಲ್ಲ. ಹಳ್ಳಿಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಕಲಿತು ದೇಶ ವಿದೇಶಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿದವರಿದ್ದಾರೆ.
ಈ ವರ್ಷದ ಹತ್ತನೆಯ ತರಗತಿಯ ಫಲಿತಾಂಶ ನೋಡಿದರೆ ತಿಳಿಯುವುದು, ಸರ್ಕಾರಿ ಹಾಗೂ ಪ್ರಸಿದ್ಧವಲ್ಲದ ಎಷ್ಟೋ ಖಾಸಗಿ ಶಾಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದಿರುವುದು.
ಕೆಲವರ ಪ್ರಕಾರ ಪ್ರತಿಷ್ಠಿತ ಶಾಲೆಗೆ ಸೇರಿದರೆ, ಮುಂದೆ ಮಕ್ಕಳಿಗೆ ಪ್ರತಿಷ್ಠಿತ ಕಾಲೇಜಿಗೆ, ನಂತರ ಉತ್ತಮ ಕೆಲಸಕ್ಕೆ ಸೇರಲು ಸಹಾಯವಾಗುತ್ತದೆ ಎಂದು. ಆದರೆ, ಜ್ಞಾನ, ಕೌಶಲ್ಯ ಹಾಗೂ ಪರಿಶ್ರಮವಿಲ್ಲದೆ ಕೇವಲ ಶಾಲೆಯ ಹೆಸರಿನಿಂದ ಯಶಸ್ಸು ಒಲಿಯುತ್ತದೆಯೇ? ನಮ್ಮ ಸಮಾಜದಲ್ಲಿ ಎಲ್ಲ ವರ್ಗದ ಜನರಿರುವಾಗ ಎಲ್ಲರಿಗೂ ಪ್ರತಿಷ್ಠಿತ ಶಾಲೆಯ ಮೊರೆಹೋಗಲು ಸಾಧ್ಯವೂ ಇಲ್ಲ ಅಲ್ಲದೆ, ಪ್ರತಿಷ್ಠಿತ ಶಾಲೆಗಳು ಮಾತ್ರ ಉತ್ತಮ ಎಂಬುದು ನಿಜವೂ ಅಲ್ಲ.

No comments: