Tuesday, June 16, 2020

ಅಲೆಮಾರಿ

ಹುಟ್ಟೂರಿನಲ್ಲೇ ಹುಟ್ಟಿದಾಗಿಂದ ಸಾಯುವತನಕ ಬೀಡು ಬಿಟ್ಟಿರುವ ಯೋಗ ಕೆಲವರದು
ನೆಲ ಜಲ ಸಂಸ್ಕೃತಿ ಭಾಷೆ ಬವಣೆಯೊಂದಿಗೇ ಬದುಕು ಕಟ್ಟಿಕೊಂಡವರು ಇವರು
ಇನ್ನು ಕೆಲವರು ಅಲೆಮಾರಿಗಳು
ಹುಟ್ಟೂರೊಂದು ಬೆಳೆದೂರೊಂದು ವ್ಯಾಪಾರಕ್ಕೊಂದು ವೃದ್ಧಾಪ್ಯಕ್ಕೊಂದು
ಇಲ್ಲಿಯೂ ಸಲ್ಲದವರು ಅಲ್ಲಿಯೂ ಸಲ್ಲದವರು
ಕೊನೆಗೆ ಎಲ್ಲಿಯೂ ಸಲ್ಲದವರು
ಇವರಿಗೆ ನೆಲ ಜಲದ ಹಂಗಿಲ್ಲ
ಆದರೆ, ಅಲೆದೂ ಅಲೆದೂ
ವರ್ಷಗಳೇ ಕಳೆದು
ಯಾವುದೋ ಗಮ್ಯ ತಲುಪಿದಾಗ
ಹುಟ್ಟೂರಿನ ಮೋಹ ಕಾಡುವುದಾಗ
ಇವರು ಅಲೆಮಾರಿಗಳು
ಅಲ್ಲಿಗೂ ಹೋಗಲಾರರು
ಇಲ್ಲೂ ಇರಲಾರರು
ಬೇರು ಗಟ್ಟಿ ಇಲ್ಲ
ಹಾರಲು ರೆಕ್ಕೆಯಿಲ್ಲ
ಅಲೆಯುವುದೊಂದೇ ತಿಳಿದಿರುವುದು
ಎಲ್ಲ ಸುಸ್ಥಿತಿಗೆ ಬರುವಷ್ಟರಲ್ಲಿ ಪುನಃ ಗುಳೆ ಹೊರಡುವ ಸಮಯ
ಪಾತ್ರೆ ಪಗಡೆಗಳೊಂದಿಗೆ ನೆನಪುಗಳ ಮೂಟೆಕಟ್ಟಿ
ಹೊರಟಾಯಿತು ಮುಂದಿನ ಊರಿಗೆ

No comments: