Thursday, June 11, 2020

ಕಣ್ಣಿನಲ್ಲೇ ಅಳೆಯುವವರು

ಪ್ರಪಂಚದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ದೇವರು ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆಯನ್ನು ನೀಡಿರುತ್ತಾನೆ. ಕೆಲವರು ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ಇನ್ನು ಕೆಲವರು ನಕಾರಾತ್ಮಕವಾಗಿ ಬಳಸಿಕೊಳ್ಳುತ್ತಾರೆ. ಈ ನಕಾರಾತ್ಮಕ ಕಲೆ ಕೆಲವೊಮ್ಮೆ ಇತರರಿಗೆ ಹಾನಿ ಉಂಟುಮಾಡಬಹುದು ಅಥವಾ ಮುಜುಗರ ಉಂಟುಮಾಡಬಹುದು. ಹಲವು ಬಾರಿ ಹಾಸ್ಯಾತ್ಮಕ ಸನ್ನಿವೇಶಗಳನ್ನೂ ಹುಟ್ಟುಹಾಕಬಹುದು. ಇಲ್ಲಿ ನಾನು ಹೇಳ ಹೊರಟಿರುವುದು ಕಣ್ಣಿನಲ್ಲೇ ಇನ್ನೊಬ್ಬರನ್ನು ಅಳೆಯುವ ಕಲೆಯ ಬಗ್ಗೆ. ಹೌದು, ಅದೂ ಒಂದು ಕಲೆ!
ಇತ್ತೀಚೆಗೆ ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ, ಪರಿಚಯದವರೊಬ್ಬರು ಸಿಕ್ಕರು. ಆಕೆಯೂ ನಮ್ಮ ದೂರದ ಸಂಬಂಧಿಯೇ. ಭೇಟಿಯಾಗಿ ಬಹಳ ದಿನಗಳಾಗಿತ್ತು. ಇಬ್ಬರೂ ಮಾತನಾಡಲು ಶುರು ಮಾಡಿದೆವು. ಕೂಡಲೇ ನನ್ನ ಗಮನಕ್ಕೆ ಬಂದ ವಿಚಾರವೆಂದರೆ, ಆಕೆಯ ದೃಷ್ಟಿ ಪದೇ ಪದೇ ನನ್ನ ಕಿವಿ ಹಾಗೂ ಕುತ್ತಿಗೆಯ ಮೇಲೆ ಹರಿದಾಡುತ್ತಿತ್ತು. ಮೊದಲು ನನಗೆ ಅರ್ಥವಾಗದಿದ್ದರೂ ನಂತರ ಹೊಳೆಯಿತು. ಅಂದು ನಾನು ಚಿನ್ನದ ಒಡವೆ ಧರಿಸದೆ ಗಿಲೀಟು ಒಡವೆ ಧರಿಸಿದ್ದೆ. ಆಕೆ ಅದು ಚಿನ್ನದ್ದು ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡಿ ನೋಡುತ್ತಿದ್ದರು ಅನ್ನಿಸುತ್ತದೆ. ಒಟ್ಟಿನಲ್ಲಿ 3-4 ಬಾರಿ ಎದುರು ಸಿಕ್ಕಾಗೆಲ್ಲಾ ಕಣ್ಣಿನಲ್ಲೇ ಅಳೆದೂ ಅಳೆದೂ ನನಗೆ ಮುಜುಗರವನ್ನುಂಟು ಮಾಡಿದರು. ನನ್ನ ಗ್ರಹಚಾರವೆಂಬಂತೆ ಊಟದ ಪಂಕ್ತಿಯಲ್ಲಿ ಆಕೆ ನನ್ನ ಪಕ್ಕವೇ ಕೂರಬೇಕೇ? ಅಲ್ಲೂ ಅದೇ ನೋಟ. ಆಕೆಗೆ ನಾನೇ ಬಾಯಿಬಿಟ್ಟು ಅದು ಗಿಲೀಟು ಒಡವೆ ಎಂದು ಹೇಳಿಬಿಡೋಣ ಎನ್ನುವಷ್ಟು ಹಿಂಸೆಯಾಯಿತು.
ಇನ್ನು ಕೆಲವರಿರುತ್ತಾರೆ, ಅವರಿಗೆ ನೀವು ತೊಟ್ಟ ಸೀರೆ ಹಾಗೂ ಒಡವೆ ಈ ಹಿಂದೆ ಬೇರೆ ಯಾವ ಸಮಾರಂಭದಲ್ಲಿ ತೊಟ್ಟಿದ್ದಿರಿ ಎಂಬುದು ನಿಖರವಾಗಿ ನೆನಪಿರುತ್ತದೆ! ಅದು ೧-೨ ವರ್ಷದ ಹಿಂದೆಯಾಗಿದ್ದರೂ ಅಷ್ಟೇ. ಏಕೆಂದರೆ ಅವರುಗಳು ಸಮಾರಂಭಗಳಿಗೆ ಹೋಗುವುದೇ ಯಾರು ಎಷ್ಟು ಚಿನ್ನ ಹಾಕಿದ್ದಾರೆ, ಎಷ್ಟು ಬೆಲೆಬಾಳುವ ಸೀರೆ ಉಟ್ಟಿದ್ದಾರೆ ಎಂದು ಅಳೆಯಲು! ಇದೇ ಜ್ಞಾಪಕಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಂಡರೆ ಎಷ್ಟೆಲ್ಲಾ ಸಾಧಿಸಬಹುದು ಅಲ್ಲವೇ?
ಕೆಲವರಿಗೆ ಕಣ್ಣಿನಲ್ಲೇ ಇನ್ನೊಬ್ಬರನ್ನು ಅಳೆಯುವುದು ಒಂದು ಚಟ. ಎಲ್ಲಿ ಯಾವಾಗ ಯಾರು ಎದುರಿಗೆ ಸಿಕ್ಕರೂ ಅವರನ್ನು ಮೇಲಿಂದ ಕೆಳಗೆ ಅಳೆದೂ ತೂಗಿ ನೋಡುವುದು. ಎದುರಿನವರಿಗೆ ಇದು ಗಮನಕ್ಕೆ ಬಂದು ಮುಜುಗರವಾದರೂ ಇವರಿಗೆ ಅದರ ಪರಿವೇ ಇರುವುದಿಲ್ಲ.
ಇನ್ನು ಕೆಲವರಿರುತ್ತಾರೆ, ಅವರಿಗೆ ನಿಮ್ಮ ಅಥವಾ ನಿಮಗೆ ಸಂಬಂಧಪಟ್ಟ ಯಾವುದೋ ವಿಷಯದ ಬಗ್ಗೆ ಪೂರ್ತಿ ಅಥವಾ ಅರ್ಧಂಬರ್ಧ ಮಾಹಿತಿ ಲಭಿಸಿರುತ್ತದೆ. ಅದನ್ನು ನಿಮ್ಮ ಬಾಯಿಂದಲೇ ಕೇಳಬೇಕೆಂದು, ಅದರ ಬಗ್ಗೆ ನೀವು ಏನು ಹೇಳುತ್ತೀರೆಂದು ತಿಳಿಯಲು ಕುತೂಹಲಿಗಳಾಗಿರುತ್ತಾರೆ. ನೀವು ಉತ್ತರಿಸುವಾಗ ನಿಜ ಹೇಳುತ್ತಿದ್ದೀರೋ ಅಥವಾ ಸುಳ್ಳು ಹೇಳುತ್ತಿದ್ದೀರೋ ಎಂದು ನಿಮ್ಮನ್ನು ಕಣ್ಣಿನಲ್ಲೇ ಅಳೆಯುತ್ತಿರುತ್ತಾರೆ. ನೀವು ನಿಜ ಹೇಳುತ್ತಿದ್ದರೂ ಅವರ ಮುಖಭಾವ ಕಂಡು ನಿಮ್ಮ ಮೇಲೇ ನಿಮಗೆ ಅನುಮಾನವಾಗಬೇಕು. ಅಕಸ್ಮಾತ್ ಅವರಿಂದ ತಪ್ಪಿಸಿಕೊಳ್ಳಲು ನೀವು ಸುಳ್ಳು ಹೇಳುತ್ತಿದ್ದರೆ, ಅವರ ಅನುಮಾನದ ನೋಟ ಅಥವಾ ವ್ಯಂಗ್ಯ ಮುಖಭಾವ ಕಂಡು, ಗೊತ್ತಿದ್ದೂ ಹಿಂಸಿಸಲು ಕೇಳುತ್ತಿದ್ದಾರೆ ಎಂಬುದು ನಿಮಗೆ ಖಾತ್ರಿಯಾಗಿಬಿಡುತ್ತದೆ.
ಈ ಕಣ್ಣಿನಲ್ಲೇ ಅಳೆಯುವವರು ನಿಮ್ಮ ಮನೆಯನ್ನೋ ಕಾರನ್ನೋ ಬಟ್ಟೆ ಬರೆಯನ್ನೋ ನೋಡಿ ನಿಮ್ಮ ಯೋಗ್ಯತೆ, ಅಂತಸ್ತು, ಸ್ವಭಾವ ಮುಂತಾದವುಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಸೃಷ್ಟಿಸಿಕೊಂಡುಬಿಡುತ್ತಾರೆ ಎಷ್ಟೋ ಬಾರಿ ಅವರ ಲೆಕ್ಕಾಚಾರ ತಪ್ಪಾಗಿರುತ್ತದೆ. ಏಕೆಂದರೆ, ಅವರು ನಿಮ್ಮ ಬಾಹ್ಯನೋಟ ಕಂಡು ನಿಮ್ಮ ಬಗ್ಗೆ ತೀರ್ಮಾನಕ್ಕೆ ಬರುವವರು. ಇಂಥವರಲ್ಲಿ ಹೆಚ್ಚಿನವರು ನಿಮ್ಮ ಬಗ್ಗೆ ಗಾಳಿಸುದ್ಧಿ ಹರಡುವವರೂ ಆಗಿರುತ್ತಾರೆ, ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡುವವರಾಗಿರುತ್ತಾರೆ. ಆದ್ದರಿಂದ, ಇಂಥವರಿಂದ ಆದಷ್ಟು ದೂರವಿರಿ!
ಇಂಥವರಿಗೆ ಒಂದೇ ಒಂದು ಸಂದೇಶವೆಂದರೆ, "ದಯವಿಟ್ಟು ನೀವೂ ಬದುಕಿ, ಬೇರೆಯವರಿಗೂ ಬದುಕಲು ಬಿಡಿ!".

No comments: