ಮಕ್ಕಳು ಸದಾ ತಮ್ಮದೇ ಆಟ ಪಾಠಗಳಲ್ಲಿ ಮುಳುಗಿರುತ್ತಾರೆ ನಿಜ. ಆದರೆ, ಸಣ್ಣ ಪುಟ್ಟ ಮನೆಗೆಲಸಗಳಲ್ಲಿ ಅವರು ಭಾಗವಹಿಸುವಂತೆ ನೀವು ಮಾಡುವುದು ಖಂಡಿತ ತಪ್ಪಲ್ಲ. ಇದನ್ನು ನೀವು ನಿಮ್ಮ ಮಗುವಿಗೆ ೪-೫ ವರ್ಷವಾಗುತ್ತಿದ್ದಂತೆಯೇ ಶುರು ಮಾಡಬಹುದು! ಪ್ರತಿದಿನ ಅಲ್ಲದಿದ್ದರೂ ಆಗಾಗ ಅವರಿಗೆ ಬಿಡುವಿದ್ದಾಗ ಅವರು ನಿಮಗೆ ಸಹಾಯ ಮಾಡಬಹುದು. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇಬ್ಬರಿಗೂ ಇದು ಅನ್ವಯಿಸುತ್ತದೆ. ಹೆಚ್ಚು ಶ್ರಮ ಬೇಕಿರದ ಕೆಲಸಗಳನ್ನು ಅವರಿಗೆ ನೀಡಬಹುದು. ಇದು ನಿಮ್ಮ ಕೆಲಸದ ಒತ್ತಡ ಕಮ್ಮಿ ಮಾಡಿಕೊಳ್ಳುವ ಉದ್ದೇಶದಿಂದ ಖಂಡಿತ ಅಲ್ಲ ಬದಲಾಗಿ ಕುಟುಂಬದಲ್ಲಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಹೊಂದಿಕೊಂಡು ಹೋಗುವುದು ಹೇಗೆಂದು ಮೊದಲಿನಿಂದ ಅವರಿಗೆ ಮನದಟ್ಟು ಮಾಡಿಕೊಡಲು ಸಹಕಾರಿಯಾಗುತ್ತದೆ. ಈಗಿನಿಂದ ಹಂತ ಹಂತವಾಗಿ ಕಲಿಯುವ ಕೆಲಸಗಳು ಮುಂದೆ ಅವರಿಗೆ ಉಪಯೋಗಕ್ಕೆ ಬರುತ್ತದೆ.
ಯಾವ ಕೆಲಸಗಳಲ್ಲಿ ಮಕ್ಕಳು ನಿಮಗೆ ಸಹಾಯ ಮಾಡಬಹುದು?
ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ.
ಯಾವ ಕೆಲಸಗಳಲ್ಲಿ ಮಕ್ಕಳು ನಿಮಗೆ ಸಹಾಯ ಮಾಡಬಹುದು?
- ನೀವು ತರಕಾರಿ ಹೆಚ್ಚುವಾಗ, ತೊಳೆದಿಟ್ಟ ತರಕಾರಿಗಳನ್ನು ಒಂದೊಂದೇ ತೆಗೆದುಕೊಡುವಂತೆ ಮಗುವಿಗೆ ತಿಳಿಸಿ. ಆದರೆ, ಹರಿತವಾದ ಚಾಕು ಅಥವಾ ಕತ್ತಿಯಿಂದ ಅವರನ್ನು ದೂರವಿರಿಸಿ.
- ಬೀನ್ಸ್ ಮುರಿಯುವುದು, ಹಸಿ ಬಟಾಣಿ ಅಥವಾ ತೊಗರಿಕಾಯಿ ಮುಂತಾದವುಗಳನ್ನು ಬಿಡಿಸುವಾಗ ಅವರೂ ಕೈ ಹಾಕಬಹುದು.
- ಅಂಗಡಿಯಿಂದ ಸಾಮಾನು ತರಲು ಅವರನ್ನು ಕರೆದುಕೊಂಡು ಹೋಗಬಹುದು. ಆದರೆ ನೆನಪಿರಲಿ, ತರಬೇಕಾದ ಸಾಮಾನು ಬಿಟ್ಟು ಬೇರೆ ಏನೂ ಕೊಡಿಸುವುದಿಲ್ಲ ಎಂದು ಮೊದಲೇ ಅವರಿಗೆ ತಾಕೀತು ಮಾಡಿರಿ.
- ಅಂಗಡಿಯಿಂದ ತರಕಾರಿ ಅಥವಾ ಸಾಮಾನುಗಳನ್ನು ತಂದಾಗ, ಅದರ ವಿಂಗಡಣೆ ಮಾಡುವಾಗ ಅವರ ಸಹಾಯ ಪಡೆಯಿರಿ.
- ಒಗೆದ ಬಟ್ಟೆಗಳನ್ನು ಒಣಗಿಸುವಾಗ ಚಿಕ್ಕ ಪುಟ್ಟ ಬಟ್ಟೆಗಳನ್ನು ಬಕೆಟಿನಿಂದ ಎತ್ತಿಕೊಡುವಂತೆ ಹೇಳಿ.
- ಬಟ್ಟೆ ಮಡಚುವಾಗ ಸಣ್ಣ ಬಟ್ಟೆಗಳನ್ನು ಮಡಚಲು ಹೇಳಿ.
- ಮನೆಯ ನೆಲವನ್ನು ಒರೆಸುವಾಗ ಅವರ ಕೈಗೂ ಸಣ್ಣ ಬಟ್ಟೆ ಕೊಟ್ಟು ಯಾವುದಾದರೂ ಒಂದು ಸಣ್ಣ ಜಾಗ ಒರೆಸಲು ಹೇಳಬಹುದು. ಅದು ಮೇಜು ಕುರ್ಚಿಯಾದರೂ ಅಡ್ಡಿಯಿಲ್ಲ.
- ನೀವು ತೊಳೆದಿಟ್ಟ ತಟ್ಟೆ ಲೋಟಗಳನ್ನೋ ಸಣ್ಣ ಪಾತ್ರೆಗಳನ್ನೋ ಸ್ವಸ್ಥಾನದಲ್ಲಿಡಲು ಅಥವಾ ಒರೆಸಿ ಇಡಲು ತಿಳಿಸಿ.
- ಅವರು ಆಟ ಆಡಿ ಮನೆ ತುಂಬಾ ಆಟ ಸಾಮಾನು ಹರಡಿದ್ದರೆ, ಅವರಿಗೇ ಅದೆಲ್ಲವನ್ನು ತೆಗೆದು ಅದರ ಜಾಗದಲ್ಲಿ ಇಡಲು ಹೇಳಿ. ನಿರಾಕರಿಸಿದರೆ, ನೀವೂ ಸಹಾಯ ಮಾಡುವುದಾಗಿ ಹುರಿದುಂಬಿಸಿ.
- ಊಟದ ಮೇಜಿನ ಮೇಲೆ ತಟ್ಟೆಗಳನ್ನು ಜೋಡಿಸಲು ಹೇಳಬಹುದು.
- ಕಪಾಟುಗಳಲ್ಲಿರುವ ವಸ್ತುಗಳನ್ನು ತೆಗೆದು ಪುನಃ ಸುಸ್ಥಿತಿಯಲ್ಲಿ ಇರಿಸುವಾಗ ಅವರ ಸಹಾಯ ಪಡೆಯಬಹುದು.
- ಗಿಡಗಳಿಗೆ ನೀರು ಹಾಕುವಾಗ ಅವರ ಕೈಯಲ್ಲೂ ನೀರು ಹಾಕಿಸಿ.
ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ.
- ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ. ಒಬ್ಬರಿಗೊಬ್ಬರು ಕಷ್ಟ ಸುಖದಲ್ಲಿ ಸಹಕರಿಸಬೇಕೆಂಬುದು ಮಕ್ಕಳಿಗೆ ತಿಳಿಯುತ್ತದೆ.
- ಅವರೊಂದಿಗೆ ಮಾತನಾಡುತ್ತ ಕೆಲಸಗಳನ್ನು ಮಾಡಿದರೆ ನಿಮ್ಮ ಹಾಗೂ ಅವರ ಮಧ್ಯೆ ಸಂವಹನ ಹೆಚ್ಚುತ್ತದೆ, ಅವರೊಂದಿಗೆ ಹೆಚ್ಚು ಸಮಯ ಕಳೆದಂತಾಗುತ್ತದೆ. ಮಕ್ಕಳು ಅದನ್ನು ಇಷ್ಟ ಪಡುತ್ತಾರೆ.
- ಟೀಮ್ ವರ್ಕ್ ಅಥವಾ ತಂಡದಲ್ಲಿ ಕೆಲಸಮಾಡಿದ ಅನುಭವ ಅವರ ಅರಿವಿಗೆ ಬರುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೆ ಮನೆ ಮಂದಿಯೆಲ್ಲಾ ಕೈ ಜೋಡಿಸಿದರೆ ಆ ಕೆಲಸ ಹೇಗೆ ಕಡಿಮೆ ಸಮಯದಲ್ಲಿ ದಕ್ಷತೆಯಿಂದ ಮುಗಿಸಬಹುದು ಎಂದು ತಿಳಿಯುತ್ತದೆ.
- ಅಡಿಗೆ ಮಾಡುವುದು, ಬಟ್ಟೆ ಒಗೆಯುವುದು ಮನೆ ಶುಚಿಗೊಳಿಸುವುದು, ಅಂಗಡಿಯಿಂದ ಸಾಮಾನು ತರುವುದು ಹೀಗೆ ಪ್ರತಿಯೊಂದು ಕೆಲಸಕ್ಕೂ ಶ್ರಮ ಅಗತ್ಯ ಎಂಬುದು ಅವರಿಗೆ ತಿಳಿಯುತ್ತದೆ. ತಮಗಾಗಿ ತಮ್ಮ ತಂದೆ ತಾಯಿಗಳು ಶ್ರಮಿಸುತ್ತಿದ್ದಾರೆ ಎಂಬುದು ಅವರಿಗೆ ಅರಿವಾಗುತ್ತದೆ.
- ಅಡಿಗೆ ಮನೆಯ ಕೆಲಸಗಳಲ್ಲಿ ಭಾಗವಹಿಸುವುದರಿಂದ ವಿವಿಧ ತರಕಾರಿ, ಹಣ್ಣುಗಳು, ಕಾಳು ಬೆಳೆಗಳ ಪರಿಚಯ ಆಗುತ್ತದೆ ಇದರಿಂದ ಅವರ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಒಂದು ಅಡಿಗೆಗೆ ಯಾವೆಲ್ಲ ಪದಾರ್ಥಗಳು ಉಪಯೋಗಿಸಿರಬಹುದು ಎಂಬ ಕನಿಷ್ಠ ತಿಳುವಳಿಕೆ ಅಗತ್ಯ.
- ಮುಂದೆ ಅವರು ವಿದ್ಯಾಭ್ಯಾಸಕ್ಕೋ ಅಥವಾ ಕೆಲಸದ ಸಲುವಾಗಿ ಬೇರೆ ಊರಿಗೋ, ರಾಜ್ಯಕ್ಕೋ ಅಥವಾ ದೇಶಕ್ಕೋ ಹೋದಾಗ ಮೊದಲಿನಿಂದಲೂ ಕಲಿತ ಈ ಕೆಲಸಗಳು ಅವರ ಸಹಾಯಕ್ಕೆ ಬರುತ್ತದೆ. ತುರ್ತುಪರಿಸ್ಥಿತಿಯಲ್ಲಿ ಧೃತಿಗೆಡದೆ, ಇನ್ನೊಬ್ಬರ ಮೇಲೆ ಅವಲಂಬಿತರಾಗದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಷ್ಟು ಸಮರ್ಥರಾಗುತ್ತಾರೆ.
- ಅವರನ್ನು ಸೋಮಾರಿಗಳಾಗದಂತೆ ತಡೆಯುತ್ತದೆ. ಮುಂದೆ ಎಂದೋ ಅನಿವಾರ್ಯವಾಗಿ ಮನಸ್ಸಿಲ್ಲದ ಮನಸ್ಸಿನಿಂದ ಮಾಡುವುದಕ್ಕಿಂತ ಮೊದಲಿನಿಂದಲೇ ಎಲ್ಲ ಕೆಲಸಗಳನ್ನು ಹೇಗೆ ಮಾಡುವುದು ಎಂಬ ಸಾಮಾನ್ಯಜ್ಞಾನ, ಅದರ ಅನುಭವ ಹಾಗೂ ಮಾಡುವ ಅಭ್ಯಾಸ ಇದ್ದರೆ ಒಳ್ಳೆಯದು.
- ಚಿಕ್ಕ ವಯಸ್ಸಿನಿಂದಲೇ ಶಿಸ್ತನ್ನು ರೂಢಿಸಿಕೊಳ್ಳಲು ಅವರಿಗೆ ಸಹಾಯವಾಗುತ್ತದೆ.
No comments:
Post a Comment