Thursday, June 11, 2020

ಮಲೆನಾಡ ಶರನ್ನವರಾತ್ರಿ

ಹಿಂದೂಗಳಿಗೆ ನವರಾತ್ರಿ ಒಂದು ವಿಶಿಷ್ಟ ಹಬ್ಬ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. ೯ ರಾತ್ರಿಗಳು ದೇವಿ ಆರಾಧನೆ ಹಾಗೂ ಹತ್ತನೆಯ ದಿನ ವಿಜಯದಶಮಿಯ ಆಚರಣೆ ಮಾಡಲಾಗುವುದು. ಕರ್ನಾಟಕದ ಉದ್ದಗಲಕ್ಕೂ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿ ಬಹಳ ವಿಶೇಷ. ಇದನ್ನು ಶರನ್ನವರಾತ್ರಿ ಎಂದೂ ಕರೆಯಲಾಗುತ್ತದೆ (ಇದಲ್ಲದೆ ಚೈತ್ರ, ಮಾಘ, ಆಷಾಢ ನವರಾತ್ರಿಗಳನ್ನೂ ಕೆಲವು ಕಡೆ ಆಚರಿಸಲಾಗುತ್ತದೆ). ಶೃಂಗೇರಿ, ಹೊರನಾಡು ಮುಂತಾದ ತೀರ್ಥ ಕ್ಷೇತ್ರಗಳಲ್ಲಿ ಶರನ್ನವರಾತ್ರಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ನಮ್ಮ ಮನೆಯಲ್ಲಿ ಕೂಡ ನವರಾತ್ರಿ ಆಚರಣೆಯ ಪದ್ಧತಿಯಿದ್ದು ಅದಕ್ಕಾಗಿ ಪ್ರತಿ ವರ್ಷ ನಾವು ಮಲೆನಾಡಿನ ಒಂದು ಪುಟ್ಟ ಹಳ್ಳಿಗೆ ಹೋಗುತ್ತೇವೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಈ ಹಳ್ಳಿಯಲ್ಲಿ ನನ್ನ ಗಂಡನ ಅಜ್ಜನ ಮನೆ ಇದ್ದು ಅಲ್ಲಿಯೇ ನಮ್ಮ ಶರನ್ನವರಾತ್ರಿ ಆಚರಣೆ. ಮನೆಯ ಸುತ್ತಲೂ ಅಡಿಕೆ , ತೆಂಗು ತೋಟ, ಹತ್ತಿರವೇ ಬತ್ತದ ಗದ್ದೆಗಳು ಹಾಗೂ ಪುಟ್ಟ ಕೆರೆ ಇದ್ದು ೨ ಕಿಮಿ ದೂರದಲ್ಲೇ ಸಣ್ಣ ಜಲಪಾತವಿದೆ. ಎತ್ತ ಕಣ್ಣು ಹಾಯಿಸಿದರೂ ಹಸಿರು, ಮೇಲೆ ಶುಭ್ರ ನೀಲಿ ಆಕಾಶ (ಇದು ಮಳೆ ಇರದಿದ್ದಾಗ. ಮಳೆ ಇದ್ದರಂತೂ ಅಲ್ಲಿನ ಪ್ರಕೃತಿ ಸೌಂದರ್ಯ ನೂರ್ಮಡಿ ಹೆಚ್ಚಾಗುತ್ತದೆ, ಪದಗಳಲ್ಲಿ ವರ್ಣಿಸಲಾಗದು. ಸ್ವರ್ಗವೇ ಧರೆಗಿಳಿದು ಬಂದಂತೆ), ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.  ಮನೆಯ ಹೊರಗಿನ ಜಗುಲಿಯಲ್ಲಿ ಕುಳಿತರೆ ತೋಟದ ಅಂದ ಕಣ್ತುಂಬುತ್ತದೆ, ಹಕ್ಕಿಗಳ ಚಿಲಿಪಿಲಿ ಕಿವಿಗೆ ಮಧುರ ಅನುಭೂತಿ ಕೊಡುತ್ತದೆ. ನಗರದ ಕಿರಿಕಿರಿಯಿಂದ ದೂರವಾಗಿ ಆ ನಿಶಬ್ಧ ವಾತಾವರಣದಲ್ಲಿ ಮನಸ್ಸು ಶಾಂತಗೊಳ್ಳುತ್ತದೆ, ಪ್ರಫುಲ್ಲಗೊಳ್ಳುತ್ತದೆ. ಮಕ್ಕಳಿಗೆ ಮನೆಯಲ್ಲಿನ ಕೊಟ್ಟಿಗೆಯ ದನ ಕರುಗಳು, ಮನೆಯ ಸಾಕು ನಾಯಿಯನ್ನು ಭೇಟಿ ಮಾಡುವುದೆಂದರೆ ಖುಷಿ. ಹಬ್ಬದ ಅಷ್ಟೂ ದಿನಗಳು ಮನೆ ನೆಂಟರಿಷ್ಟರಿಂದ ತುಂಬಿ ಕಳೆಗೊಂಡಿರುತ್ತದೆ.

ನಮ್ಮ ಪೂರ್ವೀಕರು ಹಬ್ಬಗಳ ಆಚರಣೆಯ ಪದ್ದತಿಯನ್ನು ಶುರು ಮಾಡಿದ ಉದ್ದೇಶವೂ ಅದೇ ತಾನೇ? ವರ್ಷ ಪೂರ್ತಿ ಕೆಲಸ ಕಾರ್ಯಗಳಲ್ಲಿ, ಸಂಸಾರ ತಾಪತ್ರಯಗಳಲ್ಲಿ ಮುಳುಗಿರುವ ನಾವುಗಳು ವರ್ಷದಲ್ಲಿ ಒಮ್ಮೆಯಾದರೂ ಎಲ್ಲ ಕಷ್ಟಗಳ ಮರೆತು ಹೊಸ ಬಟ್ಟೆಗಳ ತೊಟ್ಟು ರುಚಿಕರ ಅಡಿಗೆ ಮಾಡಿಕೊಂಡು ಎಲ್ಲರ ಜೊತೆ ಬೆರೆತು ಸಂತಸದಿಂದ ಕಾಲ ಕಳೆಯಲಿ ಎಂದು. ಆದ್ದರಿಂದ ಹಬ್ಬ ಎಂದರೇ ಎಲ್ಲರಲ್ಲೂ ಏನೋ ಖುಷಿಯ ಭಾವ. ಅದರಲ್ಲೂ ನಮ್ಮ ಮನೆಯಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ನವರಾತ್ರಿಯ ಪ್ರತಿ ರಾತ್ರಿಯೂ ನಮ್ಮ ಮನೆಯಲ್ಲಿ ದೇವಿಯ ಆರಾಧನೆ ನಡೆಯುತ್ತದೆ, ಮುಖ್ಯವಾಗಿ ಮೂಲ ನಕ್ಷತ್ರದ ದಿನದಿಂದ ಅಂದರೆ ಸರಸ್ವತಿ ಪೂಜೆಯ ದಿನದಿಂದ ಬೆಳಿಗ್ಗೆ ಹಾಗೂ ಸಂಜೆ ಎರಡು ಹೊತ್ತು ದೇವಿಯ ಪಾರಾಯಣ ಮಾಡಲಾಗುತ್ತದೆ. ಅಷ್ಟಮಿಯ ದಿನವೂ ಇದು ಮುಂದುವರೆದು ನವಮಿಯ ದಿನ ಪಾರಾಯಣ ಅಲ್ಲದೆ ಚಂಡಿಕಾ ಹೋಮ, ವಿಜಯದಶಮಿಯಂದು ಪಾರಾಯಣದ ಜೊತೆಗೆ ಸತ್ಯಗಣಪತಿ ವ್ರತ ನಡೆಯುತ್ತದೆ. ಪೂಜಾ ವಿಧಿಗಳು ಬರೀ ಹೆಸರಿಗೆ ಮಾತ್ರ ನಡೆಯದೆ ವಿಧಿವತ್ತಾಗಿ ಸಾಂಘವಾಗಿ ನಡೆಯುತ್ತವೆ. ಹಿರಿಯರು ಮಕ್ಕಳು ಎಲ್ಲರೂ ಪೂಜೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ.  ಎಲ್ಲರೂ ಒಟ್ಟಿಗೆ ಕುಳಿತು ಲಲಿತಾ ಶತನಾಮಾವಳಿ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಲಕ್ಷ್ಮಿ ಅಷ್ಟಕ, ಮುಂತಾದ ಇನ್ನೂ ಹಲವು ಮಂತ್ರ ಶ್ಲೋಕಗಳ ಪಠಣ ಮಾಡುತ್ತೇವೆ. ಮಕ್ಕಳು ಕೂಡ ತಮಗೆ ಬರುವ ಶ್ಲೋಕ, ಭಕ್ತಿಗೀತೆಗಳನ್ನು ಹೇಳುತ್ತಾರೆ. ಒಟ್ಟಿನಲ್ಲಿ ಸಂಪೂರ್ಣ ಭಕ್ತಿಯ ವಾತಾವರಣ ಸೃಷ್ಟಿಯಾಗುತ್ತದೆ.
ಪೂಜೆಗಾಗಿ ದೇವರ ಮನೆಯನ್ನು ಬಹಳ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ವಿವಿಧ ಹೂವುಗಳಿಂದ, ರೇಷ್ಮೆ ವಸ್ತ್ರಗಳಿಂದ ದೇವರನ್ನು ಶೃಂಗರಿಸಿದರೆ, ಮಂಟಪವನ್ನು ಹೂವು, ಬಣ್ಣದ ಕಾಗದ, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ವಿಧ ವಿಧ ಹಣ್ಣುಗಳು ಹಾಗೂ ಸಿಹಿ ಭಕ್ಷ್ಯಗಳನ್ನು ನೈವೇದ್ಯಕ್ಕೆ ಇಡಲಾಗುತ್ತದೆ.
ಬೆಳಗ್ಗಿನಿಂದಲೇ ಶುರುವಾಗುವ ಪೂಜಾ ಕೈಂಕರ್ಯಗಳು ಮಧ್ಯಾಹ್ನದ ಹೊತ್ತಿಗೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ತದನಂತರ ಸಾವಯವ ಪದಾರ್ಥಗಳಿಂದ ಮಾಡಿದ ಸಾತ್ವಿಕ ಪ್ರಸಾದ ಭೋಜನ ಅತ್ಯಂತ ಸ್ವಾದಿಷ್ಟವಾಗಿರುತ್ತದೆ. ಬಾಳೆ ಎಲೆಯನ್ನು ಸಾಲಾಗಿ ಹಾಕಿ ಭಕ್ಷ್ಯಗಳನ್ನೆಲ್ಲ ಬಡಿಸಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಮಜವೇ ಬೇರೆ. ಅನ್ನ, ತಂಬುಳಿ, ಸಾರು, ಹುಳಿ,ಮಜ್ಜಿಗೆಹುಳಿ,ತೊವ್ವೆ ,ಮೆಣಸುಗಾಯಿ,ಮಾವಿನಕಾಯಿ ಸಾರು , ಕೋಸಂಬರಿಗಳು, ಪಲ್ಯಗಳು, ಚಿತ್ರಾನ್ನ, ಸಾಸಿವೆ, ಪಾಯಸ, ಸಿಹಿ ಭಕ್ಷ್ಯ, ಖಾರದ ಕಡ್ಡಿ, ಬೋಂಡ, ಫ್ರೂಟ್ ಸಲಾಡ್, ಮೊಸರು, ಅಪ್ಪೆ ಮಿಡಿ ಉಪ್ಪಿನಕಾಯಿ, ಕುಡಿಯಲು ಬಾವಿಯ ಸಿಹಿ ನೀರು ಆಹಾ! ಇವೆಲ್ಲದರ ಸವಿ ವರ್ಣಿಸಲಸಾಧ್ಯ.
ನಂತರ ಸ್ವಲ್ಪ ವಿಶ್ರಾಂತಿ. ಸಂಜೆಗೆ ಬಿಸಿ ಬಿಸಿ ಮಲೆನಾಡ ಕಾಫಿಯನ್ನು ಸವಿಯುವ ಆನಂದ. ಸಮಯ ಹೊಂದಿಸಿಕೊಂಡು ಹತ್ತಿರವಿರುವ ನೆಂಟರ ಮನೆಗಳಿಗೆ ಭೇಟಿ ಕೊಡುತ್ತೇವೆ. ರಾತ್ರಿ ಪುನಃ ಪಾರಾಯಣ, ನಂತರ ಮಿತ ಭೋಜನ ಹಾಗೂ ಮಲಗುವ ಮುನ್ನ ಮನೆಯ ಹಸುವಿನ ನೊರೆ ಹಾಲು ಕುಡಿದು ಮಲಗಿದರೆ ಒಳ್ಳೆ ನಿದ್ದೆ . ಇಡೀ ದಿನ ಮನಸ್ಸು ದೇವರ ಆರಾಧನೆ , ಅಲ್ಲಿನ ಪರಿಸರದ ಶಾಂತತೆ , ನೆಂಟರಿಷ್ಟರ ಭೇಟಿಗಳಿಂದ ಪ್ರಸ್ಸನ್ನವಾಗಿರುತ್ತದೆ . ಗಡಿಯಾರ, ಟಿವಿ ಅಥವಾ ಮೊಬೈಲ್ ನೋಡಬೇಕು ಅನ್ನಿಸುವುದಿಲ್ಲ . ರಾತ್ರಿಯ ನಿಶಬ್ಧತೆ ಹಾಗು ಕತ್ತಲೆ ಬೆಂಗಳೂರಿನ ವಾಹನಗಳ ಶಬ್ಧ, ಬೀದಿ ದೀಪಗಳ ಬೆಳಕಿಗಿಂತ ಭಿನ್ನ. ಇಲ್ಲಿ ಆಕಾಶ, ಚಂದ್ರ, ನಕ್ಷತ್ರಗಳು ಎಷ್ಟು ಸುಂದರವಾಗಿ ಕಾಣುತ್ತವೆ . ನಗರದಲ್ಲಿ ೪ ಮಹಡಿ ಹತ್ತಿ ನೋಡಿದರೂ ಕಾಣದು !!
ಹೀಗೆ ಊರಿನಲ್ಲಿ ಹಬ್ಬದ ದಿನಗಳು ಕಳೆದ್ದದ್ದೇ ಗೊತ್ತಾಗುವುದಿಲ್ಲ . ಹಬ್ಬ ಮುಗಿದು, ಹೊರಡುವ ದಿನ ಮನಸ್ಸು ಭಾರವೆನಿಸುತ್ತದೆ. ಮಲೆನಾಡ ಮಲೆಗಳ ದಾಟಿ ಬಯಲುಸೀಮೆ ಪ್ರವೇಶಿಸುತ್ತಿದ್ದಂತೆ ಮನಸ್ಸಿಗೆ ಏನೋ ಒಂದು ರೀತಿ ವೇದನೆ . ಮುಂದಿನ ಶರನ್ನವರಾತ್ರಿ ಯಾವಾಗ ಬರುವುದೋ ಎಂದು ಅನ್ನಿಸದೇ ಇರದು.

No comments: