Thursday, June 11, 2020

ಸಾಧನೆ

"ಇಂತಹ ದುರದೃಷ್ಟವಂತ ಮಗ ಹುಟ್ಟಿದ ಕೂಡಲೇ ಸತ್ತಿದ್ದರೆ ಚೆನ್ನಾಗಿತ್ತು", ಎಂದು ಸದಾ ಗೊಣಗುತ್ತಿದ್ದ ತಂದೆ, "ನನ್ನ ಕಂದನಿಗೆ ಏಕೆ ಇಂತಹ ಶಿಕ್ಷೆ", ಎಂದು ಸದಾ ಕೊರಗುತ್ತಿದ್ದ ತಾಯಿ, ಇವರಿಬ್ಬರಿಗೂ ಈ ಸಿಹಿ ಸುದ್ಧಿ ತಿಳಿಸಬೇಕು ಎಂದು ವಿನಯ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಬಸ್ ಸ್ಟಾಪಿನಿಂದ ಮನೆಯ ಕಡೆಗೆ ಹೊರಟಿದ್ದ. 

ಇಂದು ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಕ್ಕೆಲ್ಲ, ಸದಾ ತನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದ ಅಂಧರ ಶಾಲೆಯ ಗುರುಗಳೆಲ್ಲರೂ ಕಾರಣ ಎಂಬ ಕೃತಜ್ಞತಾಭಾವ ಅವನಿಗೆ ಖಂಡಿತ ಇತ್ತು. ಅದಕ್ಕೇ ತಾನೇ ಮೊದಲು ಅಲ್ಲಿಗೇ ಹೋಗಿ ಅವರಿಗೆಲ್ಲ ನಮಸ್ಕರಿಸಿ ಸಿಹಿ ಹಂಚಿ ಬಂದಿದ್ದಾನೆ.

ವಿನಯನಿಗೆ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯೊಂದರಲ್ಲಿ , ಅಂಧರಿಗಾಗಿ ತಯಾರಿಸುತ್ತಿದ್ದ ತಂತ್ರಾಂಶಗಳ ಪರೀಕ್ಷಾ ವಿಭಾಗದಲ್ಲಿ ಉದ್ಯೋಗ ದೊರೆತಿತ್ತು. ಬದುಕುವ ಛಲ, ಆತ್ಮವಿಶ್ವಾಸ ಹಾಗೂ ಆಶಾವಾದವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ, ಇಂದು ಎಲ್ಲಾ ಸವಾಲುಗಳನ್ನು ಮೀರಿ ನಿಂತಿರುವ ವಿನಯನೇ ಜೀವಂತ ಸಾಕ್ಷಿ!

No comments: