Thursday, June 11, 2020

ಅಂತಿಮ ನಿರ್ಧಾರ

"ಬದುಕಿನಲ್ಲಿ ನೀನು ನನ್ನಂತಾಗದೆ ಏನಾದರೂ ಸಾಧಿಸಬೇಕು",  ಸರೋಜ ತನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ ಮಗಳ ಮೈಯನ್ನು ಪ್ರೀತಿಯಿಂದ ಸವರಿದಳು. ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ಅವಳಿಗೆ ನಿರಾಳವೆನಿಸಿತು.

"ಕವಿತ ನಾಳೆಯಿಂದ ಶಾಲೆಗೆ ಹೋಗುವುದು ಬೇಡ, ಬೀಡಿ ಕಟ್ಟುವ ಕೆಲಸಕ್ಕೆ ಹೋಗಲಿ, ಕಾರ್ಖಾನೆಯಲ್ಲಿ ಮಾತಾಡಿ ಬಂದಿದ್ದೇನೆ", ಶಂಕರ ಫರ್ಮಾನು ಹೊರಡಿಸಿದಾಗ ಸರೋಜಳಿಗೆ ಜಂಘಾಬಲವೆ ಉಡುಗಿ ಹೋದಂತಾಯಿತು. ಕುಡುಕ ಶಂಕರನಿಗೆ ಕೊಪ್ಪರಿಗೆ ಹಣವಿದ್ದರೂ ಸಾಲದು. ಸರೋಜ ಮನೆಕೆಲಸ ಮಾಡಿ ಸಂಪಾದಿಸುವ ನಾಲ್ಕು ಕಾಸನ್ನೂ ಬಿಡುವುದಿಲ್ಲ. ಕೊಡದಿದ್ದರೆ ಚೆನ್ನಾಗಿ ಬಾರಿಸುತ್ತಿದ್ದ. ಇತ್ತೀಚೆಗೆ ತಾನು ಮಾಡುತಿದ್ದ ಜವಾನ ಕೆಲಸವನ್ನೂ ಕಳೆದುಕೊಂಡಿದ್ದ. ಇದು ಅವನಿಗೆ ಮಾಮೂಲಿಯಾಗಿತ್ತು. ೧೨ ವರ್ಷದಿಂದ ಇದನ್ನೇ ನೋಡುತ್ತಿದ್ದ ಸರೋಜ ಬೇಸತ್ತಿದ್ದಳು. ಚೆನ್ನಾಗಿ ಓದುತ್ತಿದ್ದ ಮಗಳ ಬಗ್ಗೆ ಹಲವು ಕನಸುಗಳಿತ್ತು. ಇವಳ ಬರಡು ಜೀವನಕ್ಕೆ ಅವಳೊಬ್ಬಳೇ ಆಧಾರ.

ಸರೋಜ ಅಂತಿಮ ನಿರ್ಧಾರ ಮಾಡಿಯಾಗಿತ್ತು. ಸಾಯುವುದಲ್ಲ, ಮಗಳನ್ನು ಕರೆದುಕೊಂಡು ಶಂಕರನಿಂದ ದೂರ ಹೋಗುವುದು, ಮಗಳಿಗೆ ಅವಳ ಭವಿಷ್ಯ, ಅವಳ ಹಕ್ಕು ಕಟ್ಟಿಕೊಡುವುದು.

No comments: