ಪ್ರಾತಃಸ್ಮರಣೀಯರ ಮನ ಮರೆಯದು ಬೇಗ
ನೆನಪಾಗುವರು ನನ್ನ ಅಜ್ಜಯ್ಯ ಆಗಾಗ
ಲಕ್ಷಣವಾದ ದುಂಡು ಮುಖ,
ಬಿಳಿ-ಕಪ್ಪು ಮಿಶ್ರಿತ ಕೂದಲು
ಗುಂಡಾದರೂ ಗಟ್ಟಿ ಮೈಕಟ್ಟು,
ಬಿಳಿ ಜುಬ್ಬಾ ಕಚ್ಚೆ ಪಂಚೆ
ಕೆಲವೊಮ್ಮೆ ಅದರ ಮೇಲೊಂದು
ಕಪ್ಪು ಕೋಟು
ಮಾತು ಕಮ್ಮಿ, ಆಡಿದರೆ ಮಾತ್ರ
ಬಹಳ ತೀಕ್ಷ್ಣ
ಆದರೆ ಯಾರ ಮನಸೂ
ನೋಯಿಸದಿರುವುದು ಅವರ ಗುಣ
ಮನೆಯ ಹಾಲಿನಲ್ಲಿ ನಾವು
ಮಕ್ಕಳು ಆಡುತ್ತಿದ್ದರೆ ಆಟ
ಬೆಂಚಿನ ಮೇಲೆ ಕುಳಿತು,
ಶಾಂತ ಮುಖಾರವಿಂದದಲ್ಲಿ
ಪ್ರೀತಿ ತುಂಬಿದ ಕಣ್ಣಲ್ಲಿ
ಮೌನದ ಅವರ ನೋಟ
ಹೊರಗೆ ಹೊರಟಾಗ
ಕಾಲಿಗೆ ಕಪ್ಪು ಬೂಟು
ಬರುವಾಗ ಜುಬ್ಬಾ ಜೇಬಿನಲಿ
ನಮಗಾಗಿ ಹಸಿರು ಕವರಿನ 15 ಪೈಸೆ
ತುಪ್ಪದ ಚಾಕಲೇಟು
ನಮ್ಮ ಅಜ್ಜಯ್ಯ
ಕುಂದಾಪುರ ತಾಲ್ಲೂಕಿನವರು
ಕೋಟೇಶ್ವರ ಮಾಗಣೆಯ
ತೆಕ್ಕಟ್ಟೆಯ ಕೊಮೆಯ ಶೇಷಗಿರಿ ವೈದ್ಯರು
ಟಿ ಶೇಷಗಿರಿ ರಾವ್ ಎಂದೇ ಪ್ರಸಿದ್ಧರು
ತಂದೆ ತಾಯಿಗೆ ಹಿರಿ ಮಗ
ಊರು ಬಿಟ್ಟು
ಹಾಸನಕ್ಕೆ ಹೊರಟಾಗ
ಬರೀ 8 ವರ್ಷ ಅವರಿಗಾಗ
ಹೋಟೆಲ್ ಒಂದರಲ್ಲಿ
ಮಾಣಿಯಾಗಿ ಸೇರಿ
ಕ್ಲೀನರ್ ಸಪ್ಲೈರ್ ಎಲ್ಲ ಆಗಿ ದುಡಿದರು
ಒಂದು ದಿನ ತನ್ನದೇ
ಹೋಟೆಲ್ ಸ್ಥಾಪಿಸಿದರು
ಅದರ ಹೆಸರೂ ಎಷ್ಟು ಚೆನ್ನ
ಹೋಟೆಲ್ ಲಕ್ಷ್ಮೀ ಪ್ರಸನ್ನ
ದೊಡ್ಡ ಜಾಗ ತೆಗೆದರು
ಲಕ್ಷ್ಮೀ ನಿಲಯ ಕಟ್ಟಿಸಿದರು
ಜೊತೆಗಿನ್ನೊಂದ್ನಾಲ್ಕು ಮನೆಗಳು,
ಮೆಡಿಕಲ್ ಸ್ಟೋರನ್ನು ಮಾಡಿ
ಮಕ್ಕಳ ಮುಂದಿನ ಬದುಕಿಗೆ
ಭದ್ರ ಬುನಾದಿ ಹಾಕಿದರು
ದುರಾಸೆ ಇರದ
ವಿಶಾಲ ಹೃದಯಿ ಅಜ್ಜಯ್ಯನವರು
ಊರಿನ ಆಸ್ತಿ ಪೂರ
ತಮ್ಮನಿಗೇ ಬಿಟ್ಟುಕೊಟ್ಟರು
ಎಷ್ಟೋ ಓದುವ ಹುಡುಗರಿಗೆ,
ಮನೆಯಲ್ಲಿ ವಾರಾನ್ನ, ಉಳಿಯಲು ಜಾಗ
ಹೋಟೆಲ್ನಲ್ಲೂ ಉಚಿತ ಊಟದ
ವ್ಯವಸ್ಥೆ ಹಲವರಿಗಾಗ
ಕುಟುಂಬದವರಿಗೆ
ಒಡಹುಟ್ಟಿದವರಿಗೆ
ಊರಿನವರಿಗೆ
ಎಲ್ಲರಿಗೂ ಬೇಕಾಗಿದ್ದವರು
ಎಷ್ಟೋ ಸಹಾಯ ಮಾಡಿದವರು
ಅವರು ತೀರಿಕೊಂಡಾಗ
ಅರ್ಧ ಹಾಸನ ಸೇರಿತ್ತು
ಕೊನೆಯ ದರ್ಶನ ಪಡೆಯಲು,
ಅವರು ಅಜಾತಶತ್ರು
ಇದ್ದಾಗಲೂ ಹೋದ ಮೇಲೂ
ಹೋಗಿ ಇಷ್ಟು ವರ್ಷ ಆದರೂ
ಜನ ನೆನೆವರು ಅವರನ್ನು ಈಗಲೂ
ಮಿತಭಾಶಿ ಸರಳಜೀವಿ
ಮೃದು ಹೃದಯಿ ಉದಾರಿ
ಮಂದಸ್ಮಿತ ಅಜ್ಜಯ್ಯ
ಹಾಸನದ ಮನೆಯಲ್ಲಿ
ಅವರ ಫೋಟೋ ನೋಡಿದಾಗಲೆಲ್ಲ
ಅವರ ಧೀಮಂತ ವ್ಯಕ್ತಿತ್ವದ ಅನುಭವ,
ಅವರ ನೆನಪು ಮತ್ತೆ ಮೂಡುವುದು ಮೆಲ್ಲ

No comments:
Post a Comment