ಕೆಸರುಗದ್ದೆ ಆಗಿದೆ ಮನಸು
ತುಂಬಿಕೊಂಡು ಎಲ್ಲ ತರದ ಹೊಲಸು
ಖಾಲಿ ಮೈದಾನದಂತೆ ಹಾಗೇ ಬಿಟ್ಟರೆ
ಇನ್ನೇನಾದೀತು
ಪರಿಮಳದ ಹೂಗಳು ಅರಳಲು
ಬೇಕಲ್ಲ ಒಳ್ಳೆಯ ಆಲೋಚನೆಗಳ ಬೀಜಗಳು
ಉತ್ತಮ ವಿಚಾರಗಳ ಗೊಬ್ಬರವೂ
ಆಶಾವಾದದ ಪ್ರಖರ ಬೆಳಕೂ
ಹೃದಯದಲ್ಲೊಂದಷ್ಟು ಪ್ರೀತಿ,
ತನಗೂ ಇತರರಿಗೂ..
ಮತ್ತೊಂದಷ್ಟು ಕ್ಷಮಾಗುಣ,
ಕರುಣೆ ವಾತ್ಸಲ್ಯ ಸಹಾನುಭೂತಿ
ಹೃದಯ ವೈಶಾಲ್ಯವಿದ್ದಾಗ
ಮನಸೂ ಆಗ ವಿಶಾಲ
ಕಳೆ ಬೆಳೆಯದು
ಕೊಳೆ ಕೂರದು
ಚಿಂತೆ ಮಾಡಿದಷ್ಟೂ
ಮನಸು ಛಿದ್ರ ಛಿದ್ರ
ಋಣಾತ್ಮಕ ಚಿಂತನೆಗಳು ಸೇರಿ
ಮನೋವಿಕಾರ
ಯಾರಿಗೂ ಕಾಣದ್ದು ಕಂಡೀತು
ಯಾರಿಗೂ ಕೇಳದ್ದು ಕೇಳೀತು
ಮನದ ಸುತ್ತಲೂ
ಭ್ರಮೆಯ ಪೊರೆ ಆವರಿಸೀತು
ಆತಂಕ ಲಗ್ಗೆ ಇಟ್ಟೀತು
ಹೃದಯದ ಬಡಿತ ಏರಿ
ಭಯದ ಛಾಯೆ ಹೆಚ್ಚಿ
ಮುಖ ಕಪ್ಪಿಟ್ಟೀತು
ನಿರಾಶೆಯ ಕಾರ್ಮೋಡ
ಸದಾ ಕವಿದೀತು
ಕಣ್ಣೀರಿನ ಮಳೆ
ತಡೆಯಿಲ್ಲದೆ ಹರಿದೀತು
ದುಗುಡ ತುಂಬಿದ ಹೃದಯ
ಬೆಟ್ಟ ಹೊತ್ತಂತೆ ಮನಸು
ಇವುಗಳ ಭಾರಕ್ಕೇ
ದೇಹ ದಣಿದೀತು
ಎಲ್ಲದರಲ್ಲು ನಿರಾಸೆ
ಜೀವನವೆಂದರೆ ವೈರಾಗ್ಯ
ಜವಾಬ್ದಾರಿಗಳಿದ್ದರೂ
ನಿರಾಸಕ್ತಿ
ಶೂನ್ಯಭಾವ ಹೆಚ್ಚಾಗಿ
ಅಜ್ಞಾನದ ಕತ್ತಲೆ ತುಂಬಿ
ದಾರಿ ಕಾಣದೆ ಮನವು
ದಿಕ್ಕಿಲ್ಲದೆ ಅಲೆದೀತು
ಜಡತ್ವ ದೇಹವ ಹೊಕ್ಕಿ
ಶರೀರಕ್ಕೆ ಬೇನೆ ತಂದು
ಕಿರಿಕಿರಿ ಉಂಟು ಮಾಡಿ
ಗೋಳು ಹೊಯ್ದೀತು
ಎಂತು ಪರಿಹಾರ ಇದಕ್ಕೆಲ್ಲ
ಏನೂ ತೋಚದಾಗಿದೆ
ಸಾಗರ ಮಧ್ಯದಲ್ಲೆಲ್ಲೋ
ಕಳೆದು ಹೋದಂತಾಗಿದೆ

