ವರ್ಷದೊಳಗಿನ ಚಿಣ್ಣರು ಪ್ಲೇ ಗ್ರೂಪ್, ನರ್ಸರಿ, ಎಲ್ ಕೆಜಿ, ಯುಕೆಜಿ ಮುಗಿಸಿದ ನಂತರ ಒಂದನೆಯ ತರಗತಿಗೆ ಹೋಗುವುದು ವ್ಯವಸ್ಥಿತ ಕಲಿಕೆಯ ಒಂದು ಭಾಗವಾಗಿದೆ. ತಮ್ಮ ಸಮವಯಸ್ಕ ಮಕ್ಕಳೊಂದಿಗೆ ಬೆರೆತು ಆಡುವುದು, ಕಲಿಯುವುದು ಮಕ್ಕಳಿಗೂ ಖುಷಿ ಕೊಡುವ ಸಂಗತಿ. ಖಾಸಗಿ ಶಾಲೆಗಳು ಕಲಿಕಾಪೂರ್ವ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿವೆ. ಇದರ ಮುಖ್ಯ ಉದ್ದೇಶ, ಮಕ್ಕಳ ಸಾಮಾಜಿಕ ಹಾಗೂ ಭಾವನಾತ್ಮಕ ಕೌಶಲ್ಯ ಅಭಿವೃದ್ಧಿ ಪಡಿಸುವುದು, ತನ್ನ ಸುತ್ತಲಿನ ವಾತಾವರಣ ಅರಿಯಲು ಅವಕಾಶ ಮಾಡಿಕೊಡುವುದು, ಆತ್ಮವಿಶ್ವಾಸ ಹೆಚ್ಚಿಸುವುದು, ತನ್ನದೇ ವಯಸ್ಸಿನ ಮಕ್ಕಳೊಂದಿಗೆ ಸಂವಹನ ಕ್ರಿಯೆ, ಆಟ, ಪಾಠ ಕಲಿಸುವುದಾಗಿದೆ. ಅಲ್ಲದೇ, ಒಂದನೆಯ ತರಗತಿಯಿಂದ ಶುರು ಆಗುವ ಕಾಡ್ಡಾಯ ವಿದ್ಯಾಭ್ಯಾಸಕ್ಕೂ ಮುಂಚೆ ಮಕ್ಕಳಿಗೆ ಎಲ್ಲ ವಿಷಯಗಳ ಮೂಲ ಪರಿಕಲ್ಪನೆಗಳನ್ನು (ಬೇಸಿಕ್ ಕಾನ್ಸೆಪ್ಟ್ಸ್) ಕಲಿಸುವುದಾಗಿದೆ. ಆದ್ದರಿಂದ ಕಲಿಕಾಪೂರ್ವ ಶಿಕ್ಷಣ ಮಕ್ಕಳ ವಿದ್ಯಾಭ್ಯಾಸದ ಮೊದಲನೆಯ ಮುಖ್ಯ ಮೈಲಿಗಲ್ಲು ಎನ್ನಿಸಿಕೊಳ್ಳುತ್ತದೆ. ಆದರೆ, ಕಳೆದೊಂದು ವರ್ಷದಿಂದ ಇಂತಹ ಎಷ್ಟೋ ಮಕ್ಕಳಿಗೆ ಭೌತಿಕ ಶಾಲೆಗೆ ಹೋಗುವುದು ಅಥವಾ ಆನ್ಲೈನ್ ತರಗತಿಗೆ ಸೇರುವುದು ಸಾಧ್ಯವಾಗಿಲ್ಲ. ಎಷ್ಟೋ ಪೋಷಕರು ತಮ್ಮ ಮಗು ಗಮನವಿಟ್ಟು ಆನ್ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದೋ, ಅರ್ಧ ಗಂಟೆಯ ತರಗತಿಗೆ ಸಾವಿರಾರು ರೂಪಾಯಿ ವ್ಯಯಿಸುವುದು ಸಮರ್ಪಕವಲ್ಲ ಎಂದೋ ಅಥವಾ ಚಿಕ್ಕ ಮಕ್ಕಳಿಗೆ ಈಗಿನಿಂದಲೇ ಮೊಬೈಲ್, ಲ್ಯಾಪ್ಟಾಪ್ ಕೊಡುವುದು ಒಳ್ಳೆಯದಲ್ಲವೆಂದೋ ಆನ್ಲೈನ್ ತರಗತಿಗೆ ಸೇರಿಸುತ್ತಿಲ್ಲ. ಇಂತಹ ಮಕ್ಕಳು ಮನೆಯಲ್ಲೇ ಕಲಿಯಲು ಖಂಡಿತ ಅಡ್ಡಿಯಿಲ್ಲ. 'ಹೋಮ್ ಸ್ಕೂಲಿಂಗ್' ಮೂಲಕ ಮಕ್ಕಳಿಗೆ ಮನೆಯಲ್ಲೇ ಪೋಷಕರು ಪ್ರೀ ಸ್ಕೂಲಿನಲ್ಲಿ ಕಲಿಸುವ ವಿಷಯಗಳನ್ನು ಕಲಿಸಬಹುದಾಗಿದೆ. ಪ್ರತಿದಿನ ಮಕ್ಕಳಿಗೆ ಕಲಿಸಲಿಕ್ಕಾಗಿಯೇ 1-2 ಗಂಟೆ ವ್ಯಯಿಸಲು ಪೋಷಕರು ತಯಾರಿದ್ದರೆ ಮನೆಯಲ್ಲಿಯೇ ಕಲಿಸುವುದು ಖಂಡಿತ ಕಷ್ಟವಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಕಲಿಸಲು ಗಮನಿಸಬೇಕಾದ ವಿಚಾರಗಳು ಇಂತಿವೆ
* ಮಗು ಖುಷಿಯಿಂದ ಕಲಿಯುವಂತಹ ವಾತಾವರಣ ಸೃಷ್ಟಿಯಾಗಬೇಕು. ಮನೆಯಲ್ಲಿ ಒಂದು ನಿರ್ದಿಷ್ಟ ಸ್ಥಳವನ್ನು ಆಯ್ದುಕೊಂಡು ಪ್ರತಿದಿನ ಮಗುವನ್ನು ಅಲ್ಲೇ ಕೂರಿಸಿಕೊಂಡು ಕಲಿಸಲು ಶುರುಮಾಡಬೇಕು.
* ಪ್ರಸ್ತುತ ನಿಮ್ಮ ಮಗುವಿನ ವಯಸ್ಸಿಗನುಗುಣವಾಗಿ ಪಠ್ಯಕ್ರಮವೇನೆಂದು ತಿಳಿದುಕೊಂಡು ಅದಕ್ಕೆ ಬೇಕಾದ ಪುಸ್ತಕಗಳನ್ನು ಅಮೆಜಾನ್ ನಂತಹ ವೆಬ್ ಸೈಟ್ ಇಂದ ತರಿಸಬಹುದು. ಪಠ್ಯಕ್ರಮ ತಿಳಿದುಕೊಳ್ಳಲು ಗೂಗಲ್ ಅಥವಾ ಯೂಟ್ಯೂಬ್ ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
* ಕಲಿಸಲು ಬೇಕಾದ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳಬೇಕು. ಪಠ್ಯಪುಸ್ತಕ, ನೋಟ್ಬುಕ್, ಪೆನ್ಸಿಲ್, ವಿವಿಧ ಚಟುವಟಿಕೆಗಳಿಗೆ ಅವಶ್ಯಕವಾದ ಸಾಮಾನುಗಳು ಮುಂತಾದವು.
*ಕಲಿಕೆಯ ವೇಳಾಪಟ್ಟಿಯಲ್ಲಿ ಸ್ಥಿರತೆ ಇರಲಿ. ಪ್ರತಿದಿನ ಆದಷ್ಟು ಒಂದೇ ಸಮಯಕ್ಕೆ ಶುರು ಮಾಡುವುದು ಒಳ್ಳೆಯದು.
* ಬಾಯಿಪಾಠ ಮಾಡಿಸುವುದು, ಬರೆಸುವುದು, ಚಿತ್ರಗಳಿಗೆ ಬಣ್ಣ ತುಂಬಿಸುವುದು, ಚಟುವಟಿಕೆಗಳು ಇತ್ಯಾದಿಗಳನ್ನು ವಿವಿಧ ಹಂತಗಳಲ್ಲಿ ಮಕ್ಕಳಿಗೆ ಕಲಿಸಬಹುದು.
* ಪ್ರತಿಯೊಂದನ್ನೂ ಯಾವ ಹಂತದಲ್ಲಿ ಹೇಗೆ ಪರಿಣಾಮಕಾರಿಯಾಗಿ ಕಲಿಸಬೇಕು ಎಂದು ತಿಳಿಸುವ ಹಲವಾರು ಚಾನಲ್ಗಳು ಯೂಟ್ಯೂಬಿನಲ್ಲಿ ಲಭ್ಯವಿದೆ. ಯಾವ ವಿಷಯಗಳನ್ನು ಬಾಯಿಪಾಠ ಮಾಡಿಸಬೇಕು, ಅಕ್ಷರ ಬರೆಯುವ ಮುಂಚೆ ಅಡ್ಡ-ಉದ್ದ ಗೆರೆಗಳನ್ನು ಬರೆಸಲು ಹೇಗೆ ಕಲಿಸಬೇಕು ಮುಂತಾದ ಮಾಹಿತಿಗಳು ಸಿಗುತ್ತವೆ.
* ಮುಖ್ಯವಾಗಿ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಹಲವು ವಿಷಯಗಳನ್ನು ಕಲಿಸಬಹುದು. ಮಗುವಿನ ನೆನಪಿನ ಶಕ್ತಿ, ತಾರ್ಕಿಕ ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಮನೆಯಲ್ಲೇ ಸುಲಭವಾಗಿ ಮಾಡಿಸುವಂತಹ ಹಲವಾರು ಚಟುವಟಿಕೆಗಳಿವೆ ಹಾಗೂ ಅವನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕಲಿಸುವ ವಿಧಾನವನ್ನು ತಿಳಿಸಿಕೊಡಲು ಅನೇಕ ಯೂಟ್ಯೂಬ್ ವಿಡಿಯೋಗಳು ಸಿಗುತ್ತವೆ, ಅವುಗಳ ಉಪಯೋಗ ಪಡೆದುಕೊಳ್ಳಬಹುದು.
* ಸಾಮಾನ್ಯವಾಗಿ ಪ್ರೀ ಸ್ಕೂಲ್ಗಳಲ್ಲಿ ಪ್ರತಿ ತಿಂಗಳು ಹೊಸ ವಿಷಯ ಶುರು ಮಾಡಿ, ಮಕ್ಕಳು ಸರಿಯಾಗಿ ಕಲಿಯುವ ತನಕ ಅದಕ್ಕೇ ಒತ್ತು ನೀಡುತ್ತಾರೆ. ಉದಾಹರಣೆಗೆ ಮಗುವಿಗೆ ಬಣ್ಣಗಳ ಪರಿಚಯ ಸರಿಯಾಗಿ ಆಗುವ ತನಕ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚು ಮಾಡಿಸುವುದು ಇತ್ಯಾದಿ. ಮನೆಯಲ್ಲಿಯೇ ಇರುವ ಬಣ್ಣ ಬಣ್ಣದ ಸಾಮಾನುಗಳನ್ನು ಇದಕ್ಕೆ ಬಳಸಿಕೊಳ್ಳಬಹುದು.
* ಮಗುವಿನ ವಯಸ್ಸಿಗೆ ತಕ್ಕಂತೆ ಅವರ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ಹಲವಾರು ಚಟುವಟಿಕೆಗಳನ್ನು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಮಾಡಿಸಬಹುದು. ಉದಾಹರಣೆಗೆ ವಿವಿಧ ಆಕಾರಗಳ ಹೆಸರನ್ನು ಕಲಿಸಲು ಚೆಂಡು, ಪುಸ್ತಕ, ಡಬ್ಬಿ ಮುಂತಾದ ವಸ್ತುಗಳನ್ನು ಬಳಸಿಕೊಳ್ಳಬಹುದು.
* ದೈಹಿಕ ಚಟುವಟಿಕೆಗಳಾದ ಕಪ್ಪೆ ಓಟ, ಕೆರೆ ದಡ ಆಟ, ಒಂದು ಕೋಣೆಯಿಂದ ಇನ್ನೊಂದು ಕೊನೆಗೆ ಓಡಿ ಹೋಗಿ ಸಾಮಾನು ತರುವುದು, ಚೆಂಡನ್ನು ಸ್ವಲ್ಪ ದೂರದಲ್ಲಿ ಇಟ್ಟಿರುವ ಬುಟ್ಟಿಗೆ ಗುರಿಯಿಟ್ಟು ಹಾಕುವುದು, ಮುಂತಾದ ಹಲವು ಆಟಗಳನ್ನು ಆಡಿಸಬಹುದು.
* ಮಕ್ಕಳ ಆಟ ಸಮಾನು, ಅಡಿಗೆ ಮನೆಯ ಪರಿಕರಗಳಾದ ಲೋಟ, ಚಮಚ, ಬಟ್ಟಲು ಮುಂತಾದವುಗಳನ್ನು ಬಳಸಿ ಎಣಿಕೆ, ಸಮಾನ ಹಾಗೂ ವಿಭಿನ್ನ ವಸ್ತುಗಳ ಅಂತರ ಮುಂತಾದ ಚಟುವಟಿಕೆಗಳನ್ನು ಮಾಡಿಸಬಹುದು. ಗೋಧಿ ಅಥವಾ ಮೈದಾ ಹಿಟ್ಟಿನ ಉಂಡೆಯಿಂದ ವಿವಿಧ ಅಕ್ಷರಗಳ ರಚನೆಯನ್ನು ಕಲಿಸಬಹುದು. ಗೋಲಿ, ಕಡಲೆಬೀಜವನ್ನು ಮಕ್ಕಳ ಕೈಯಿಂದ ಒಂದು ಬಟ್ಟಲಿಂದ ಇನ್ನೊಂದು ಬಟ್ಟಲಿಗೆ ಹಾಕಿಸುವುದು ಮಕ್ಕಳಿಗೆ ಖುಷಿ ಕೊಡುವಂತಹ ಚಟುವಟಿಕೆಗಳು. ಅಲ್ಲದೇ ಇಂತಹ ಆಟಗಳಿಂದ, ಬರೆಯುವಾಗ ಪೆನ್ಸಿಲ್ ಸರಿಯಾಗಿ ಹಿಡಿಯಬೇಕಾದ ಅವರ ಕೋಮಲ ಕೈ ಬೆರಳುಗಳಿಗೆ ಶಕ್ತಿ ಸಿಗುತ್ತದೆ.
* ವಾರದಲ್ಲಿ ಒಂದು ದಿನ ಸಣ್ಣ ಕಥೆಗಳು, ಪದ್ಯಗಳನ್ನು, ನೃತ್ಯವನ್ನು ಕಲಿಸಬಹುದು.
* ದೇವರ ಶ್ಲೋಕ, ಧ್ಯಾನ, ಸರಳ ವ್ಯಾಯಾಮಗಳನ್ನು ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳಬಹುದು.
* ಮನೆಯಲ್ಲಿ ದೊಡ್ಡ ಮಕ್ಕಳು ಇದ್ದಲ್ಲಿ ಅವರನ್ನೂ ಇದಕ್ಕೆಲ್ಲ ಸೇರಿಸಿಕೊಳ್ಳುವುದರಿಂದ ಚಿಕ್ಕ ಮಕ್ಕಳಿಗೆ ಹುರುಪು ಮೂಡುವುದು.
* ಮಗುವಿಗೆ ಪ್ರತಿದಿನ ಒಂದೇ ರೀತಿ ಆಸಕ್ತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಅವರ ಆಸಕ್ತಿ ಗಮನಿಸಿ ಪ್ರತಿದಿನದ ಪಠ್ಯದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು.
* ಕಲಿಯಲು ತೀರ ಆಸಕ್ತಿ ತೋರದ ದಿನಗಳಲ್ಲಿ ಕೇವಲ ಆಟ ಆಡಿಸಬಹುದು.
ಪೋಷಕರಿಗೆ ಸಮಯ, ತಾಳ್ಮೆ, ಆಸಕ್ತಿಯಿದ್ದರೆ ಖಂಡಿತ ಮಕ್ಕಳಿಗೆ ಮನೆಯಲ್ಲಿಯೇ ಕಲಿಕೆ ಕಷ್ಟವಲ್ಲ ಅಲ್ಲದೇ ಪೋಷಕರಿಗೂ ಇದೊಂದು ಉತ್ತಮ ಕಲಿಕಾ ಅನುಭವ ನೀಡುತ್ತದೆ, ಕ್ರಿಯಾಶೀಲತೆ ಹೆಚ್ಚಿಸುತ್ತದೆ, ಪರಿಣಾಮಕಾರಿಯಾಗಿ ಕಲಿಸುವ ಹೊಸ ಹೊಸ ವಿಧಾನಗಳ ಅರಿವು ಮೂಡುತ್ತದೆ. ಕೋವಿಡ್ ಇಂದ ಉಂಟಾಗಿರುವ ಕಲಿಕೆಯ ಅಂತರವನ್ನು ಇದರಿಂದ ಸಮರ್ಥವಾಗಿ ಸರಿದೂಗಿಸಬಹುದು. 'ಮನೆಯೇ ಮೊದಲ ಪಾಠಶಾಲೆ' ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾರ್ಥಕಗೊಳಿಸಬಹುದು. ಶಾಲೆಯಿಂದ, ಸ್ನೇಹಿತರಿಂದ ದೂರವಿರುವ ಪುಟಾಣಿಗಳಿಗೆ ಬೇಸರವಾಗದಂತೆ ಮನೆಯಲ್ಲಿಯೇ ಅವರನ್ನು ಸಕ್ರಿಯರಾಗಿರುವಂತೆ ಮಾಡಬಹುದು. ಏಕೆಂದರೆ, ಅವರ ಹೂವಿನಂತಹ ಮುಗ್ಧ ಮನಸ್ಸು ಬಾಡದಂತೆ ಪೊರೆಯುವುದು ಈ ಸಮಯದಲ್ಲಿ ಅತ್ಯವಶ್ಯಕ.



No comments:
Post a Comment