Tuesday, June 7, 2016

ಬಾಲ್ಯ

 ೭೦  ಹಾಗು ೮೦ರ ದಶಕದಲ್ಲಿ ಹಾಗು ಅದಕ್ಕೂ ಮುಂಚೆ ಜನಿಸಿದವರಿಗೆಲ್ಲ ಖಂಡಿತ ಅನುಭವಕ್ಕೆ ಬಂದಿರುವ ಒಂದು ಸಂಗತಿಯೆಂದರೆ ತಮ್ಮ ಬಾಲ್ಯಕ್ಕೂ ಇಂದಿನ ಪೀಳಿಗೆಯ ಮಕ್ಕಳ ಬಾಲ್ಯಕ್ಕೂ ಇರುವ ವ್ಯತ್ಯಾಸ ಅಜಗಜಾಂತರ ಎಂದು. ನಾನು ೮೦ರ ದಶಕದಲ್ಲಿ ಜನಿಸಿದವಳು ಹಾಗು ಒಂದು ಹೆಣ್ಣು ಮಗುವಿನ ತಾಯಿ. ನಾನು ಮತ್ತು ನನ್ನ ತಮ್ಮ ಚಿಕ್ಕವರಿದ್ದಾಗ ನಮ್ಮ ತಾಯಿ ಸದಾ ಹೇಳುತ್ತಿದ್ದ ಮಾತೆಂದರೆ ಅವರ ಬಾಲ್ಯದಲ್ಲಿ ಅವರು ಆನಂದಿಸಿದಷ್ಟು ನಾವು ಆನಂದಿಸುತ್ತಿಲ್ಲ ಎಂದು . ನಮ್ಮ ತಾಯಿಯ ಊರು ಕರಾವಳಿ . ದಕ್ಷಿಣ ಕನ್ನಡ ಜಿಲ್ಲೆಯ ಒಂದು ಚಿಕ್ಕ ಹಳ್ಳಿ . ಹಳೆಯ ಕಾಲದ ದೊಡ್ಡ ಹೆಂಚಿನ ಮನೆ, ಸುತ್ತಲು ದಟ್ಟ ಗೇರು ಬೀಜದ ಕಾಡು , ಮನೆಯ ಮುಂದೆ ಸಮೃದ್ಧ ತೋಟ , ತೋಟದ ಆಚೆ ಬತ್ತದ ಗದ್ದೆಗಳು , ಅದಕ್ಕೆ ಅಂಟಿಕೊಂಡಂತೆ ಚಿಕ್ಕದೊಂದು ಕೆರೆ , ನೀರಿನ ಕಾಲುವೆ , ದೂರದಲ್ಲಿ ಸಮುದ್ರ ಹೀಗೆ ಸಮೃದ್ಧವಾದ ಊರು . ಅವರ ಬಾಲ್ಯವೆಲ್ಲ ಅಲ್ಲೇ ಕಳೆದ್ದದ್ದು . ಅವರು ಹೇಳುವಂತೆ ಆಗ ಗಾಳಿ, ನೀರು , ತಿನ್ನುವ ಅನ್ನ ಪ್ರತಿಯೊಂದು ಶುದ್ಧವಾಗಿತ್ತು . ಮಕ್ಕಳ ಮನಸ್ಸು ಅಷ್ಟೇ ಮುಗ್ಧವಾಗಿತ್ತು . ಪೇಟೆಯ ಗಂಧ ಗಾಳಿಯು ಸೋಕಿರಲಿಲ್ಲ . ಈಗಿನಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಂದೆ ತಾಯಿಯಿಂದಾಗಲಿ ಶಾಲೆಯಿಂದಾಗಲಿ ಒತ್ತಡವಿರಲಿಲ್ಲ . ಹೆಚ್ಚು ಆಸೆ ದುರಾಸೆಗಲಿಲ್ಲದ ಸರಳ ಜೀವನ, ಗುಣಮಟ್ಟದ ಜೀವನ .  ಮನುಷ್ಯ ಮನುಷ್ಯನ ಜೊತೆ ಕಳೆಯಲು ಹೆಚ್ಚು ಸಮಯವಿರುತ್ತಿತ್ತು

ಇನ್ನು ನಮ್ಮ ಬಾಲ್ಯದ ಬಗ್ಗೆ ಹೇಳುವುದಾದರೆ , ಪ್ರತಿ ಬೇಸಿಗೆ ರಜೆಗೂ ಅಜ್ಜಿಯ ಮನೆಗೆ ಹೋಗುತ್ತಿದ್ದೆವು , ನಮ್ಮ ತಾಯಿಯ ಬಾಲ್ಯ ಕಳೆದ ಅದೇ ಹಳ್ಳಿಗೆ. ವರ್ಷವಿಡೀ ಆ ದಿನಕ್ಕಾಗಿ ಕಾಯುತ್ತಿದ್ದೆವು. ನಮಗಾಗಿ ಆಸೆಯಿಂದ ಅಜ್ಜ ಅಜ್ಜಿಯೂ ಕಾಯುತ್ತಿದ್ದರು . ಚಿಕ್ಕಮ್ಮ, ದೊಡ್ಡಮ್ಮಂದಿರ , ಮಾವಂದಿರ ಮಕ್ಕಳೂ ಬರುತ್ತಿದ್ದರು . ೨ ತಿಂಗಳು ಪೂರ್ತಿ ಕಳೆದ್ದದ್ದೇ ತಿಳಿಯುತ್ತಿರಲಿಲ್ಲ.ನಾವು ಆಡದೆ ಇದ್ದ ಆಟಗಳೇ ಇಲ್ಲ . ಚನ್ನೆಮಣೆ , ಚೌಕಾಭಾರ , ಪಗಡೆ , ಹಾವು ಏಣಿ, ಕಲ್ಲುಕೋಟೆ , ನಾಲ್ಕು ಕಂಬ , ಜೂಟಾಟ , ಕಣ್ಣಾಮುಚ್ಚಾಲೆ , ಇಸ್ಪೀಟಾಟ , ಚೈನ್ಕಟ್ ,ಕಳ್ಳ ಪೋಲಿಸ್ ,ಕಲರ್ ಕಲರ್ , ಕೆರೆ ದಡ , ಕಲ್ಲು ಮಣ್ಣು , ಟೈಯರ್ ಓಡಿಸೋ ಆಟ , ತೋಟದಲ್ಲಿ ಅಡಿಕೆ ಮರಗಳಿಗೆ ಹಗ್ಗ ಕಟ್ಟಿ ಜೋಕಾಲಿ ಆಟ , ಕೂತು ಚಪ್ಪಾಳೆ ಹೊಡೆಯುತ್ತ ಆಡುವ ಆಟಗಳು , ನೆನಪಿನ ಶಕ್ತಿ ಅಳೆಯುವ ಆಟಗಳು , ಗಾಜಿನ ತುಂಡುಗಳು ಮಣ್ಣಿನ ಗುಂಡಿಗಳಲ್ಲಿ ಹುಗಿದು ಹುಡುಕೋ ಆಟ, ಮಣ್ಣಿನ ಮನೆ ಕಟ್ಟೋ ಆಟ , ಮನೆ ಮನೆ ಆಟ , .... ಒಂದೇ ಎರಡೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲವೇನೋ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಆಟ . ಮಧ್ಯ ಮಧ್ಯ ಜಗಳ , ರಾಜಿ ಎಲ್ಲವೂ ಇತ್ತು. ಮಕ್ಕಳೆಲ್ಲ ಒಟ್ಟಿಗೆ ಊಟ ಮಾಡುತ್ತಿದ್ದೆವು . ಸಾಲಾಗಿ ತಟ್ಟೆ ಹಾಕಿಕೊಂಡು ಕೂರುತ್ತಿದ್ದೆವು . ಕೆಲವೊಮ್ಮೆ ತೋಟದಿಂದ ಕಿತ್ತು ತಂದ ಬಾಳೆ ಎಲೆಯಲ್ಲಿ ಊಟ . ಮನೆಯ ಅಕ್ಕಿಯ ಅನ್ನದ ಊಟ , ಆಹಾ ಅದರ ರುಚಿಯೇ ಬೇರೆ . ಯಾವ ಅಡಿಗೆ ಮಾಡಿ ಹಾಕಿದರೂ ಸದ್ದಿಲ್ಲದೇ ತಿಂದು ಮುಗಿಸುತ್ತಿದ್ದೆವು . ಮನೆಯಲ್ಲಿ ಕೊಟ್ಟಿಗೆ , ಅದರಲ್ಲಿ ದನ ಕರುಗಳು ಎತ್ತು ಇದ್ದವು . ದಿನಾ ಬೆಳಿಗ್ಗೆ ಸಂಜೆ ರುಚಿಯಾದ ನೊರೆ ಹಾಲು ಸಿಗುತ್ತಿತ್ತು. ದಿನಾ ರಾತ್ರಿ ಊಟ ಆದ ಮೇಲೆ ಅಜ್ಜ ಕಥೆ ಹೇಳುತ್ತಿದ್ದರು . ಮಕ್ಕಳೆಲ್ಲ ಒಟ್ಟಿಗೆ ಮಲಗುತ್ತಿದ್ದೆವು . 


ಊರಿನಲ್ಲಿ ನಮಗೆ ಕರೆಂಟು ಹೋದರೂ ಖುಷಿ , ಸೀಮೆಯೆಣ್ಣೆ ಚಿಮಣಿಬುಡ್ಡಿ ಹಚ್ಚಿಡುತ್ತಿದ್ದರು ಅಜ್ಜಿ , ಅದರ ಬೆಳಕಲ್ಲೇ ಕೂತು ಹರಟೆ ಹೊಡೆಯುತ್ತಿದ್ದೆವು . ಬೆಳದಿಂಗಳ ರಾತ್ರಿಗಳಲ್ಲಿ ಅಂಗಳದಲ್ಲಿ ಕೂತು ಅಜ್ಜಿಯ ಕೈ ತುತ್ತಿನ ಬೆಳಂದಿಗಳ ಊಟ ಮಾಡಿದ್ದಿದೆ . ಹಗಲು ಹೊತ್ತು ರಣ ಬಿಸಿಲನ್ನು ಲೆಕ್ಕಿಸದೆ ತೋಟ ಗದ್ದೆ ಹಾಡಿ ಸುತ್ತಿ ಕಾಟು ಹಣ್ಣುಗಳ ಹೆಕ್ಕಿ ತಿಂದಿದ್ದಿದೆ . ಸೀಬೇಕಾಯಿ , ಸಪೋಟ ಎಲ್ಲ ಮರ ಹತ್ತಿ ಕಿತ್ತು ತಿನ್ನುತ್ತಿದ್ದೆವು . ಹಕ್ಕಿ ತಿಂದ ಹಣ್ಣುಗಳು ಬಲು ರುಚಿ . ಮಾವಿನಕಾಯಿ ಹಣ್ಣು ದೊಡ್ಡ ಮರಗಳಿಂದ ಕೊಕ್ಕೆಯಲ್ಲಿ ಕಿತ್ತದ್ದಿದೆ . ೧-೨ ಬಾರಿಯಾದರೂ ಸಮುದ್ರಕ್ಕೆ ಹೋಗಲೇ ಬೇಕು . ಅದಕ್ಕಾಗಿ ೫-೬ ಕಿಮಿ ಗದ್ದೆಯ ಹಾದಿಯಲ್ಲಿ ನೆಡೆದು , ನಂತರ ಬಸ್ ಹತ್ತಿ ಹೋಗಬೇಕು . ಸಮುದ್ರದಲ್ಲಿ ಮುಳುಗಿ ತೇಲಿ ಬಿದ್ದು ಒದ್ದಾಡಿದ್ದಿದೆ .ಊರಲ್ಲಿರುವಷ್ಟು ದಿನ ಒಂದಲ್ಲಾ ಒಂದು ನೆಂಟರ ಮನೆಯಲ್ಲಿ ಪೂಜೆ , ಊಟ ಇದ್ದೇ ಇರುತ್ತಿತ್ತು . ದಕ್ಷಿಣೆ ಆಸೆಗೆ ಹೋಗುತ್ತಿದ್ದೆವು . ಬಂದ ದುಡ್ಡಲ್ಲಿ ಐಸ್ಕ್ಯಾಂಡಿ ತೆಗೆದುಕೊಳ್ಳುತ್ತಿದ್ದೆವು . ಸಂಜೆ ಊರಲ್ಲೇ ಇದ್ದ ಅತ್ತೆ ಮಕ್ಕಳ ಜೊತೆ ದನಗಳನ್ನು ಮೇಯಿಸಿಕೊಂಡು ಬರಲು ಹೋಗುತ್ತಿದ್ದೆವು , ಅವುಗಳನ್ನು ಮೇಯಲು ಬಿಟ್ಟು ಆಟ ಆಡುತ್ತಿದ್ದೆವು . ಅಜ್ಜಿ ಒಮ್ಮೊಮ್ಮೆ ಮನೆಯಲ್ಲಿ ಬೆಳೆದ ಹುರಿದ ನೆನಗಡಲೇ , ಖಾರದಕಡ್ಡಿ ಅಥವಾ ಮಂಡಕ್ಕಿ ಪೊಟ್ಟಣ ಕಟ್ಟಿ ಕೊಟ್ಟರೆ ಅದನ್ನು ಗದ್ದೆಯ ಅಂಚಿನಲ್ಲಿ ಕೂತು ತಿನ್ನುತ್ತಿದ್ದೆವು . ೨೪ ಘಂಟೆ ಆನಂದಿಸುವುದು ಬಿಟ್ಟು ಬೇರೆಯ ಯಾವ ವ್ಯಾಕುಲತೆ ನಮ್ಮ ಮನದಲ್ಲಿರಲಿಲ್ಲ . ಮೊಬೈಲ್ ಇಂಟರ್ನೆಟ್ ಇರದ ಕಾಲ . ಮನೆಯಲ್ಲೊಂದು ಸಣ್ಣ ಕಪ್ಪು ಬಿಳುಪು ಟಿವಿ ಇತ್ತು , ಅದರಲ್ಲಿ ವಾರಕ್ಕೊಮ್ಮೆ ಭಾನುವಾರ ಸಂಜೆ ಬರುತ್ತಿದ್ದ ಚಲನಚಿತ್ರ ನೋಡುತ್ತಿದ್ದೆವು ಅಷ್ಟೇ ... ಇನ್ನೇನು ನಮ್ಮ ನಮ್ಮ ಊರುಗಳಿಗೆ ವಾಪಸ್ಸು ಹೋಗುವ ದಿನ ಹತ್ತಿರ ಬಂದಾಗ ಬೇಜಾರಾದರೂ ಹೊರಡುವ ಕೊನೆ ಘಳಿಗೆ ತನಕವೂ ಆಡುತ್ತಿದೆವು .... ಮತ್ತೆ ಮುಂದಿನ ವರ್ಷ ಬೆಸಿಗೆಗಾಗಿ ಕಾಯುವಿಕೆ , ಅಜ್ಜ ಅಜ್ಜಿಯ ನಿಷ್ಕಲ್ಮಶ ಪ್ರೀತಿಯ ಸೆಳೆತ ಸದಾ ಇರುತ್ತಿತ್ತು . ... 


ನಮ್ಮ ನಮ್ಮ ಊರಿಗೆ ಬಂದ ಮೇಲೂ ಮನೆಯ ಅಕ್ಕ ಪಕ್ಕ ಮತ್ತು ಶಾಲೆಯಲ್ಲೂ ಅನೇಕ ಗೆಳೆಯರು . ಶಾಲೆಯಲ್ಲೂ ಲಂಚ್ ಬ್ರೇಕ್ ಮತ್ತು ಪೀಟಿ ಪಿರಿಯಡ್ನಲ್ಲಿ ಅನೇಕ ರೀತಿಯ ಆಟ ಆಡುತ್ತಿದ್ದೆವು . ಹರಟೆ ಹೊಡೆಯುತ್ತಿದ್ದೆವು ಎಲ್ಲರ ಜೊತೆ ಬೆರೆಯುತ್ತಿದ್ದೆವು . ಮನೆಗೆ ಬಂದ ಮೇಲೆ ರಾತ್ರಿ ದೀಪ ಹಚ್ಚಿ ಅಮ್ಮ ಕತ್ತಲಾಯಿತು ಬನ್ನಿ ಎಂದು ಕೂಗುವ ತನಕವೂ ಆಟ . ಬಂದು ಹೋಂವರ್ಕ್ ಮಾಡಿ ಊಟ ಮಾಡಿ ಮಲಗಿದರೆ ದಿನ ಕಳೆಯಿತು ... ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಓದು ... ನಮ್ಮ ಊಟ ತಿಂಡಿಯ ಬಗ್ಗೆಯೂ ಪಾಲಕರು ಹೆಚ್ಚು ತಲೆ ಕೆಡೆಸಿಕೊಳ್ಳಬೇಕಿರಲಿಲ್ಲ ಎಲ್ಲ ಹಣ್ಣು ತರಕಾರಿ ಪದಾರ್ಥಗಳನ್ನು ತಿನ್ನುತ್ತಿದ್ದೆವು . ಹೊರಗಿನ ತಿಂಡಿಯ ಪ್ರಭಾವ ಬಹಳ ಕಮ್ಮಿ . ಬಟ್ಟೆಯೂ ಅಷ್ಟೇ ವರ್ಷಕ್ಕೆ ೩-೪ ಮುಖ್ಯ ಹಬ್ಬಗಳ ಸಮಯದಲ್ಲಿ ಸಿಗುತ್ತಿದ್ದ ಹೊಸ ಬಟ್ಟೆಗಳ ತೊಡಲು ಸಂಭ್ರಮ . ದುಡ್ಡು ಕೂಡ ನಮ್ಮ ಕೈಗೆ ಹೆಚ್ಚಿಗೆ ಸಿಗುತ್ತಿರಲಿಲ್ಲ . ಹಬ್ಬದ ಸಮಯದಲ್ಲಿ ಅಪ್ಪ ಕೊಡುತ್ತಿದ್ದರು , ಬಿಟ್ಟರೆ ಯಾರಾದರು ನೆಂಟರು ಬಂದು ಊರಿಗೆ ಹೊರಡುವಾಗ ಮಕ್ಕಳ ಕೈಗೆ ೫-೧೦ ರುಪಾಯಿ ಕೊಡುವುದು ವಾಡಿಕೆ ನಮಗೆ ಸಮ್ಭ್ರಮ. ಇಷ್ಟು ಸುಂದರವಾಗಿದ್ದ ನಮ್ಮ ಬಾಲ್ಯವನ್ನೇ ನಮ್ಮ ತಾಯಿ ಅವರಷ್ಟು ನಾವು ಆನಂದಿಸಿಲ್ಲ ಎಂದು ಹೇಳುವಾಗ ನಮ್ಮ ಮಕ್ಕಳ ಬಾಲ್ಯ ಕಂಡು ಎಷ್ಟು ನೊಂದಾರು . ನಮ್ಮ ಮಕ್ಕಳ ಬಾಲ್ಯ ಕಂಡರೆ ನಿಜ್ಜಕ್ಕೂ ನಮಗೂ ನೋವಾಗುತ್ತದೆ .... 

ಈಗಿನ ಮಕ್ಕಳು ಮನೆಯ ಹೊರಗೆ ಹೋಗಿ ಆಡುವುದೇ ಅಪರೂಪ . ಆಡಿದರೂ ಬರೀ ಕ್ರಿಕೆಟ್ ಫುಟ್ಬಾಲ್  ಸೈಕ್ಲಿಂಗ್ ಶಟಲ್ ಕಾಕ್ ಅಷ್ಟೇ . ಅದು ಕೂಡ ಕೆಲವೇ ನಿಮಿಷಗಳು . ಅಷ್ಟರಲ್ಲಿ ಅವರ ಸಂಯಮ ಮುಗಿದಿರುತ್ತದೆ . ಮನೆಗೆ ವಾಪಸ್ಸಾಗಿ ಟಿವಿ ಮೊಬೈಲ್ ಇಂಟರ್ನೆಟ್ ಜೊತೆ ಉಳಿದ ಸಮಯ . ಹೆಚ್ಚು ಸಮಯ ಒಂದು ಮಗು ಇನ್ನೊಂದು ಮಗು ಜೊತೆ ಹೊಂದಿಕೊಂಡು ಆಡುವುದೂ ಇಲ್ಲ . ಎಷ್ಟೋ ಮಕ್ಕಳಿಗೆ ಶಾಲೆಯ ಕೆಲವು ಗೆಳೆಯರು ಬಿಟ್ಟರೆ ಮನೆಯ ಹತ್ತಿರ ಗೆಳೆಯರೂ ಇಲ್ಲ . ಈಗಿನ ಮಕ್ಕಳ ಬಾಲ್ಯ ಬಹಳ ನೀರಸ ಎನಿಸುತ್ತದೆ . ನಮ್ಮಂತೆ ಅವರು ಮುಂದೆ ತಮ್ಮ ಬಾಲ್ಯವ ನೆನೆಸಿಕೊಳ್ಳುವರೋ ಎಂದು ಅನುಮಾನವಾಗುತ್ತದೆ. ಈಗಿನ ತಂದೆ ತಾಯಂದಿರೂ ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಬೆಳೆಸುತ್ತಾರೆ . ಹೆಚ್ಚು ಕಡಿಮೆ ಮಕ್ಕಳಿಗೆ ಎಲ್ಲವೂ ಕೇಳದೆಯೇ ಸಿಗುತ್ತದೆ . ಬಟ್ಟೆ,ದುಡ್ಡು,ತಿಂಡಿ ಇತ್ಯಾದಿ . ಮಕ್ಕಳಿಗೆ ದುಡ್ಡಿನ ಬೆಲೆ , ಕಷ್ಟದ ಬೆಲೆ ತಿಳಿಯುವುದೇ ಇಲ್ಲ . ಎಷ್ಟು ಸಿಕ್ಕರೂ ತೃಪ್ತಿಯಿಲ್ಲ . 


ಹಳ್ಳಿಯಲ್ಲಿ ಗಿಡ ಮರ ಪ್ರಾಣಿ ಪಕ್ಷಿ ನೀರು ಆಕಾಶದ ಮಧ್ಯೆ ಕಳೆದ ನಮ್ಮ ಬಾಲ್ಯಕ್ಕೂ ಕಾಂಕ್ರೀಟ್ ಕಾಡಿನ ಮಧ್ಯ ಬೆಳೆಯುತ್ತಿರುವ ಈಗಿನ ಮಕ್ಕಳ  ಬಾಲ್ಯಕ್ಕೂ ಅಜಗಜಾಂತರ ..... !!! 

No comments: