Wednesday, October 26, 2016

ಮಲೆನಾಡ ಶರನ್ನವರಾತ್ರಿ

ಪ್ರತಿ ವರ್ಷ ಶರನ್ನವರಾತ್ರಿ ಆಚರಣೆಗೆ ನಾವು ಅತ್ತಿಗಾರಿಗೆ ಹೋಗುತ್ತೇವೆ . ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿ ಅಂಚೆಗೆ ಸೇರುವ ಒಂದು ಪುಟ್ಟ ಹಳ್ಳಿ . ಮಲೆನಾಡ ಒಂದು ಸುಂದರ ಹಳ್ಳಿ . ಇಲ್ಲಿ ನನ್ನ ಗಂಡನ ಮೂಲ ಮನೆ ಇದೆ . ಅವರ ಅಜ್ಜನ ಮನೆ (ಅವರ ತಂದೆಯ ತಂದೆ) . ಈಗ ಚಿಕ್ಕಪ್ಪ ವಾಸವಿದ್ದಾರೆ . ಸುತ್ತಲೂ ಅಡಿಕೆ , ತೆಂಗು  ತೋಟ , ಮಧ್ಯೆ ಮನೆ . ಮನೆಯ ಹತ್ತಿರವೇ ಬತ್ತದ ಗದ್ದೆಗಳು ,ಒಂದು ಪುಟ್ಟ ಕೆರೆ , ಮನೆಯಿಂದ ೨ ಕಿಮಿ ದೂರದಲ್ಲೇ ಅಚ್ಚಕನ್ಯೆ ಜಲಪಾತ ಇದೆ  . ಎಲ್ಲಿ ಕಣ್ಣು ಹಾಯಿಸಿದರೂ ಹಸಿರು , ಮೇಲೆ ಶುಭ್ರ ನೀಲಿ ಆಕಾಶ (ಮಳೆ ಇರದಿದ್ದಾಗ), ಪ್ರಶಾಂತ ವಾತಾವರಣ . ಮನೆಯ ಹೋರಗಿರುವ ಜಗಲಿಯಲ್ಲಿ ಕೂತರೆ ಎದುರಿಗೇ ತೋಟ, ಹಕ್ಕಿಗಳ ಚಿಲಿಪಿಲಿ ಕಿವಿಗೆ ಬೀಳುತ್ತದೆ . ಇಂಥ ನಿಶಬ್ಧ ವಾತಾವರಣ , ಬೆಂಗಳೂರಿನ ಕಿರಿಕಿರಿಯಿಂದ ದೂರ, ಮನಸ್ಸನ್ನು ಶಾಂತವಾಗಿರಿಸುತ್ತದೆ. ಅದಕ್ಕೆ ಅಲ್ಲಿಗೆ ಹೋಗುವುದೆಂದರೆ ಎಲ್ಲರಿಗೂ ಖುಷಿ . ನನಗೆ ಹಾಗು ನನ್ನ ಗಂಡನಿಗೆ ಬೆಂಗಳೂರಿನ ಜಂಜಾಟದಿಂದ ಮುಕ್ತಿ ಸಿಕ್ಕರೆ , ಮಗಳಿಗೆ ಅಲ್ಲಿ ಕೊಟ್ಟಿಗೆಯ ಹಸು ಕರುಗಳು , ಮನೆಯ ಸಾಕು ನಾಯಿಯ ಮೇಲೆ ಪ್ರೇಮ . ನಾನು ,ಗಂಡ , ಮಗಳು , ಅತ್ತೆ , ಕೆಲವೊಮ್ಮೆ ಮೈದುನ ಹಾಗು ಅವರ ಸಂಸಾರ ಎಲ್ಲರೂ ಶರನ್ನವರಾತ್ರಿ ಆಚರಿಸಲು ಅಲ್ಲಿಗೆ ಹೋಗುತ್ತೇವೆ . ಹಾಗೆಯೇ ಗಂಡನ ಚಿಕ್ಕಪ್ಪ ದೊಡ್ಡಪ್ಪಂದಿರೂ ಬರುತ್ತಾರೆ .

ಶರದ್ ಋತುವಿನಲ್ಲಿ ಬರುವ ನವರಾತ್ರಿಯೇ ಶರನ್ನವರಾತ್ರಿ . ಅತ್ತಿಗಾರು ಮನೆಯಲ್ಲಿ  ನವರಾತ್ರಿಯ ಮೊದಲ ದಿನದಿಂದಲೂ ಪ್ರತಿದಿನ ದೇವಿಯ ಆರಾಧನೆ ನೆಡೆಯುತ್ತದೆ ಆದರೆ ಮುಖ್ಯವಾಗಿ ಮೂಲ ನಕ್ಷತ್ರದ ದಿನದಂದು ಸರಸ್ವತಿ ಪೂಜೆಯ ದಿನದಿಂದ, ಬೆಳಿಗ್ಗೆ ಹಾಗು ಸಂಜೆ ದೇವಿಯ ಪಾರಾಯಣ ಶುರುವಾಗುತ್ತದೆ. ನಾವು ಪ್ರತಿ ವರ್ಷ ಸರಸ್ವತಿ ಪೂಜೆಯ ದಿನ ಅಥವಾ ಅದರ ಮರುದಿನ ಅಲ್ಲಿಗೆ ಹೋಗುತ್ತೇವೆ . ಅಷ್ಟಮಿಯ ದಿನವೂ ೨ ಹೊತ್ತು ಪಾರಾಯಣ ನಡೆಯುತ್ತದೆ. ನವಮಿಯ ದಿನ ಪಾರಾಯಣ ಅಲ್ಲದೆ ದುರ್ಗಾ ಹೋಮ, ವಿಜಯದಶಮಿಯಂದು ಪಾರಾಯಣದ ಜೊತೆಗೆ ಸತ್ಯ ಗಣಪತಿ ವ್ರತ ನಡೆಯುತ್ತದೆ. ಪೂಜಾ ವಿಧಿಗಳು ಬರೀ ಹೆಸರಿಗೆ ಮಾತ್ರ ನಡೆಯದೆ ವಿಧಿವತ್ತಾಗಿ ಸಾಂಘವಾಗಿ ನಡೆಯುತ್ತದೆ . ಪೂಜೆಯ ನಂತರ ಸಾವಯವ ಅಡಿಗೆ ಸಾಮಾನುಗಳಿಂದ ಮಾಡಿದ ಸಾತ್ವಿಕ ಪ್ರಸಾದ ಭೋಜನ ಅತ್ಯಂತ ಸ್ವಾದಿಷ್ಟವಾಗಿರುತ್ತದೆ . ಅನ್ನ,ತಂಬುಳಿ,ಸಾರು,ಹುಳಿ,ಮಜ್ಜಿಗೆಹುಳಿ,ತೊವ್ವೆ ,ಮೆಣಸುಗಾಯಿ,ಮಾವಿನ ಕಾಯಿ ಸಾರು ,೨ ಕೋಸಂಬರಿ,೨ ಪಲ್ಯ,ಚಿತ್ರಾನ್ನ,ಪಾಯಸ,ಸಿಹಿ ಭಕ್ಷ್ಯ,ಖಾರದ ಕಡ್ಡಿ,ಬೋಂಡ,ಮೊಸರು,ಒಳ್ಳೆ ಮಿಡಿ ಉಪ್ಪಿನಕಾಯಿ,ಕುಡಿಯಲು ಬಾವಿಯ ಸಿಹಿ ನೀರು  ...

ಬೆಳಿಗ್ಗೆ ಸ್ನಾನಾದಿ ವಿಧಿಗಳು ಆದ ನಂತರ ಪಾರಾಯಣ (ಮನೆಯ ಗಂಡಸರು ಮಾಡುವುದು) , ನಂತರ ಸಾತ್ವಿಕ ತಿಂಡಿ  . ಮತ್ತೆ ಪೂಜೆ , ಹೋಮಗಳು (ಪುರೋಹಿತರು ಮಾಡಿಸುವುದು) , ನಂತರ ಊಟ, ಬಿಸಿ ಬಿಸಿ ಮಲೆನಾಡ ಕಾಫಿ  ಹಾಗು ವಿಶ್ರಾಮ . ಸಂಜೆ ಹತ್ತಿರವಿರುವ ನೆಂಟರ ಮನೆಗಳಿಗೆ ಭೇಟಿ , ರಾತ್ರಿ ಮತ್ತೆ ಪಾರಾಯಣ, ನಂತರ ಊಟ . ಇಡೀ ದಿನ ಮನಸ್ಸು ದೇವರ ಆರಾಧನೆ , ಅಲ್ಲಿನ ಪರಿಸರದ ಶಾಂತತೆ , ನೆಂಟರ ಭೇಟಿಗಳಿಂದ ಪ್ರಸ್ಸನ್ನವಾಗಿರುತ್ತದೆ . ಗಡಿಯಾರ, ಟಿವಿ  ಅಥವಾ ಮೊಬೈಲ್ ನೋಡಬೇಕು ಅನ್ನಿಸುವುದಿಲ್ಲ . ಹೊಟ್ಟೆ ತುಂಬಾ ಗಡದ್ದಾಗಿ ತಿಂದು (ಅಡಿಗೆ ಭಟ್ಟರ ಕೈ ಚಳಕ ), ೧ ಲೋಟ ಹಸುವಿನ ನೊರೆ ಹಾಲು  ಕುಡಿದರೆ ರಾತ್ರಿ ಒಳ್ಳೆ ನಿದ್ದೆ ಬರುತ್ತದೆ . ರಾತ್ರಿಯ ನಿಶಬ್ಧತೆ ಹಾಗು ಕತ್ತಲೆ ಬೆಂಗಳೂರಿನ ವಾಹನಗಳ ಶಬ್ಧ ಹಾಗು ಬೀದಿ ದೀಪಗಳ ಬೆಳಕಿಗಿಂತ ಭಿನ್ನ. ಇಲ್ಲಿ ಆಕಾಶದ ಚಂದ್ರ ನಕ್ಷತ್ರಗಳು ಎಷ್ಟು ಸುಂದರವಾಗಿ ಕಾಣುತ್ತದೆ . ಬೆಂಗಳೂರಿನಲ್ಲಿ ೪ ಮಹಡಿ ಹತ್ತಿ ನೋಡಿದರೂ ಕಾಣದು !!

೪ ದಿನ ಕಳೆದ್ದದ್ದೇ ಗೊತ್ತಾಗುವುದಿಲ್ಲ . ಹೊರಡುವ ದಿನ ಮನಸ್ಸು ಭಾರ . ಮಲೆನಾಡ ಮಲೆಗಳ ದಾಟಿ ಬಯಲುಸೀಮೆ ಪ್ರವೇಶಿಸುತ್ತಿದ್ದಂತೆ ಏನೋ ಒಂದು ರೀತಿ ವೇದನೆ . ಮುಂದಿನ ನವರಾತ್ರಿ ಯಾವಾಗ ಬರುವುದೋ ಅನ್ನಿಸುತ್ತದೆ .